ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್, ಲೈಟ್ ಹೌಸ್ ಗಂಗೊಳ್ಳಿ ಇದರ 34ನೇ ವಾರ್ಷಿಕೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ಕೊಂಕಣ ಖಾರ್ವಿ ಕಬ್ಬಡಿ ಅಸೋಸಿಯೇಶನ್ ಮತ್ತು ಶ್ರೀ ಜಟ್ಟಿಗೇಶ್ವರ ಮಹಿಳಾ ಮಂಡಳಿ ಲೈಟ್‌ಹೌಸ್ ಗಂಗೊಳ್ಳಿ ಸಹಕಾರದೊಂದಿಗೆ ಕೊಂಕಣಿ ಖಾರ್ವಿ ಸಮಾಜ ಬಾಂಧವರಿಗಾಗಿ ಲೈಟ್‌ಹೌಸ್ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟದಲ್ಲಿ ಮದ್ದುಗುಡ್ಡೆ ಫ್ರೆಂಡ್ಸ್ ಕುಂದಾಪುರ ತಂಡ ಪ್ರಥಮ ಸ್ಥಾನ ಪಡೆದು ’ಶ್ರೀ ಜಟ್ಟಿಗೇಶ್ವರ ಟ್ರೋಫಿ-2025 ನ್ನು ತನ್ನದಾಗಿಸಿಕೊಂಡಿತು.
ಕೋಟೆ ಜಟ್ಟಿಗೇಶ್ವರ ತಂಡ ದ್ವಿತೀಯ ಸ್ಥಾನ, ಸಹರಾ ಗಂಗೊಳ್ಳಿ ತಂಡ ತೃತೀಯ ಸ್ಥಾನ ಹಾಗೂ ನವದುರ್ಗ ಹೊನ್ನಾವರ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಸುಮಾರು 15 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ ಖಾರ್ವಿ, ಅತಿಥಿಯಾಗಿದ್ದ ಅಖಿಕ ಕರ್ನಾಟಕ ಕೊಂಕಣ ಖಾರ್ವಿ ಕಬ್ಬಡಿ ಅಸೋಸಿಯೇಷನ್ ಉಪಾಧ್ಯಕ್ಷ ಜಗದೀಶ್ ತಾಂಡೇಲ, ಖ್ಯಾತ ಕ್ರೀಡಾ ಪಟು ಮಡಿ ಹರೀಶ್ ಖಾರ್ವಿ, ಉದ್ಯಮಿ ಅಕ್ಷಯ ಖಾರ್ವಿ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಹಿರಿಯರಾದ ಮಡಿ ಬಿಕ್ಯ ಖಾರ್ವಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ವಿನಿ ಆರ್. ಖಾರ್ವಿ ಮತ್ತು ಅಕ್ಕಮ್ಮ ಯು., ಸಂಘದ ಅಧ್ಯಕ್ಷ ಚಂದ್ರ ಕೆ. ಖಾರ್ವಿ, ಉಪಾಧ್ಯಕ್ಷ ಕಿರಣ್ ಖಾರ್ವಿ, ಕಾರ್ಯದರ್ಶಿ ಮಡಿ ಚೇತನ್ ಖಾರ್ವಿ, ಮಹಿಳಾ ಮಂಡಳಿಯ ಅಧ್ಯಕ್ಷೆ ಜಯಂತಿ ಜಿ. ಖಾರ್ವಿ, ಮಹಿಳಾ ಮಂಡಳಿ ಜೊತೆ ಕ್ರೀಡಾ ಕಾರ್ಯದರ್ಶಿ ಉಷಾ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.