ಮೂಡುಬಿದಿರೆ: ಎಲ್ಲಾವನ್ನೂ ಕಬಳಿಸಬೇಕೆಂಬ ದಾಹ ನಮ್ಮ ನಾಳಿನ ಭವಿಷ್ಯವನ್ನು ಅಸ್ಥಿರಗೊಳಿಸುತ್ತಿದೆ. ದಿನದಿಂದ ದಿನಕ್ಕೆ ನಿಸರ್ಗದಿಂದ ದೂರವಾಗಿ, ಸೂಕ್ಷ್ಮ ಸಂವೇದನೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ನಿಸರ್ಗ ಹಾಗೂ ಕರುಳಬಳ್ಳಿಯ ಸಂಬಂಧ ತುಂಡಾಗಿದೆ ಎಂದು ಹಿರಿಯ ಲೇಖಕ ನಾಗೇಶ್ ಹೆಗಡೆ ಅಭಿಪ್ರಾಯಪಟ್ಟರು.
ಆಳ್ವಾಸ್ ನುಡಿಸಿರಿ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ಪರಿಸರ ಕಾಳಜಿ: ಹೊಸತನದ ಹುಡುಕಾಟ’ ಎಂಬ ವಿಷಯದಲ್ಲಿ ಅವರು ಮಾತನಾಡಿದರು. ಏಕಕಾಲಕ್ಕೆ ವೈವಿಧ್ಯಮಯ ಪ್ರಳಯ ಭೂಮಿಯನ್ನು ಭಾದಿಸುತ್ತಿದೆ. ಮನುಷ್ಯನೇ ಇಂದು ಪ್ರಳಯವಾಗಿರುವುದು ಇದಕ್ಕೆಲ್ಲ ಕಾರಣ. ಜನಸಂಖ್ಯೆ ಮಾತ್ರವೇ ಹೆಚ್ಚಾಗದೇ ಪ್ರತಿಯೋಬ್ಬರೂ ಭೂಮಿಯನ್ನು ಹೀರುವ ಪ್ರಮಾಣವೂ ಹೆಚ್ಚುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳು ರಾಜಕೀಯ ಮುತ್ಸದ್ಧಿಗಳನ್ನು, ವಿಜ್ಞಾನಿಗಳನ್ನು ಗೊಂಬೆಯಂತೆ ಆಡಿಸುತ್ತಿದ್ದು ಸುಳ್ಳು ಮಾಹಿತಿಯನ್ನು ಸಮಾಜಕ್ಕೆ ರವಾನಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಸ್ಥಳೀಯ ಸಂಪನ್ಮೂಲಗಳ ವ್ಯವಸ್ಥಿತ ಬಳಕೆಯಿಂದ ಮಾತ್ರ ಇಂತಹ ವ್ಯವಸ್ಥೆಯನ್ನು ಬಗ್ಗುಬಡಿಯಲು ಸಾಧ್ಯ ಎಂದರು.
ನಮ್ಮ ಪರಿಸರ ಹೋರಾಟದ ಹಾದಿಯನ್ನು ಬದಲಿಸಿಕೊಳ್ಳಬೇಕಾದ ತುರ್ತು ಇಂದಿದೆ. ನದಿ ತಿರುವು ಬೇಡ. ಬದಲಿಗೆ ಮಳೆ ನೀರಿನ ಸಂಗ್ರಹಣೆ, ಮರುಬಳಕೆಯ ತಂತ್ರಜ್ಞಾನ ಬೇಕು. ವಿದ್ಯುತ್ ಬೇಕು ಉಷ್ಟ ಸ್ಥಾವರಗಳ ಬದಲಿಗೆ ಸೂರ್ಯನ ಬೆಳಕು ಸಮುದ್ರದ ಅಲೆಗಳನ್ನು ಬಳಸಿ ಉತ್ಪಾದಿಸುವ ತಂತ್ರಜ್ಞಾನ ಬೇಕು. ಎಲ್ಲಾ ಸೌಕರ್ಯಗಳೂ ಬೇಕು. ಆದರೆ ಅದು ಸುಸ್ಥಿರ ವಿಧಾನದಲ್ಲಿ ತಯಾರಾಗುವಂತಿರಬೇಕು ಎಂಬ ಕೂಗು ನಮ್ಮದಾಗಬೇಕು ಎಂದರು.