ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶ್ರೀ ಸೇನೇಶ್ವರ ದೇವರ ವಾರ್ಷಿಕ ಜಾತ್ರೆ ಹಾಗೂ ಶ್ರೀ ಮನ್ಮಹಾರಥೋತ್ಸವವು ವೈಶಾಖ ಶುದ್ಧ ಪಂಚಮಿ ದಿನವಾದ ಶುಕ್ರವಾರ ಅದ್ದೂರಿಯಾಗಿ ಜರುಗಿತು. ಐತಿಹ್ಯವುಳ್ಳ ಬೈಂದೂರು ರಥೋತ್ಸವದಲ್ಲಿ ಊರ ಪರವೂರ ಭಕ್ತಸಮೂಹ ಪಾಲ್ಗೊಂಡು ಪುನೀತರಾದರು.
ದೇವಳದ ತಂತ್ರಿ ಕೃಷ್ಣ ಸೋಮಯಾಜಿ ಆಚಾರ್ಯತ್ವದಲ್ಲಿ ಎ.26ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡು ಧಾರ್ಮಿಕ ಕೈಕಂರ್ಯಗಳು ಹಾಗೂ ವಿವಿಧ ಕಟ್ಟೆ ಉತ್ಸವಗಳು ನಡೆಯಿತು.
ಶುಕ್ರವಾರ ಬೆಳಿಗ್ಗೆಯಿಂದಲೇ ವೈದಿಕರಿಂದ ಧಾರ್ಮಿಕ ವಿಧಿವಿಧಾನಗಳು ನಡೆದವು. ಉತ್ಸವ ಮೂರ್ತಿಯನ್ನು ಸರ್ವಾಲಂಕಾರಗೊಳಿಸಿ, ಮಂಗಳವಾದ್ಯ, ಕೊಂಬು ಕಹಳೆ ಹಾಗೂ ಚಂಡೆ ನಾದದೊಂದಿಗೆ ಮಧ್ಯಾಹ್ನ ರಥಾರೋಹಣಗೈಯಲಾಯಿತು. ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಿತು. ಸಂಜೆ ಮಂಗಳ ಮುಹೂರ್ತದಲ್ಲಿ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ರಥವನ್ನು ಎಳೆದು ಕೃತಾರ್ಥರಾದರು. ಅನಂತರ ಅಷ್ಟಾವಧಾನ ಸೇವೆ ಸೇರಿದಂತೆ ವಿವಿಧ ಸೇವೆಗಳು ಶ್ರೀ ಸೇನೇಶ್ವರನಿಗೆ ಸಮರ್ಪಿಸಲಾಯಿತು.
ಶನಿವಾರದಂದು ಅವಭೃಥೋತ್ಸವ ಹಾಗೂ ಭಾನುವಾರದಂದು ನಗರೋತ್ಸವ ಜರುಗಲಿದೆ.
ರಥೋತ್ಸವದ ಚಾಲನೆ ನೀಡುವ ಪೂರ್ವದಲ್ಲಿ ಮಸೀದಿಗೆ ತೆರಳಿ ಮುಸ್ಲಿಂ ಬಾಂಧವರನ್ನು ಮತ್ತು ಸ್ಥಳೀಯ ಪೊಲೀಸ್ ಠಾಣಾಧಿಕಾರಿಯನ್ನು ದೇವಸ್ಥಾನಕ್ಕೆ ಕರೆತರುವ ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ. ಹೀಗಾಗಿ ಜಾತಿ ಮತ ಭೇದವಿಲ್ಲದೇ ಎಲ್ಲಾ ಧರ್ಮಿಯರೂ ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಬಿಲ್ಲವ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಸದಸ್ಯರಾದ ರಾಜೇಶ ಐತಾಳ್, ಬಿ. ದೊಟ್ಟಯ್ಯ ಪೂಜಾರಿ, ಪರಮೇಶ್ವರ ಪಟ್ವಾಲ್, ಪ್ರಶಾಂತಕುಮಾರ್ ಶೆಟ್ಟಿ, ಜಯರಾಮ ಯಡ್ತರೆ, ವಸಂತಕುಮಾರ್ ಶೆಟ್ಟಿ, ಇಂದಿರಾ ಕೊಠಾರಿ, ಶಾಂತಾ ಆಚಾರ್ಯ, ಧಾರ್ಮಿಕ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಇದ್ದರು. ಬೈಂದೂರು ವೃತ್ತ ನಿರೀಕ್ಷಕ ಸವಿತ್ರತೇಜ್ ಮಾರ್ಗದರ್ಶನದಲ್ಲಿ ಪಿಎಸ್‌ಐ ತಿಮ್ಮೇಶ್ ಬಿ. ಎನ್. ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.















