ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಶಿಕ್ಷಕರಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ನಂತಹ ಸಂಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ನಿಮ್ಮ ವ್ಯಕ್ತಿತ್ವ ವಿಕಸನಗೊಂಡು ವಿದ್ಯಾರ್ಥಿಗಳಿಗೂ ನೀವು ಮಾದರಿಯಾಗಬಲ್ಲಿರಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟೀ ವಿವೇಕ್ ಆಳ್ವ ಹೇಳಿದರು.
ಅವರು ಕುವೆಂಪು ಸಭಾಂಗಣದಲ್ಲಿ ನಡೆದ ರಾಜ್ಯದ ಮೊದಲ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ರೇಂಜರ್ಸ್ ಘಟಕದ ಉದ್ಘಾಟನಾ ಸಮಾರಂಭದ ಉದ್ಘಾಟಕರಾಗಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಅನುಕರಿಸುವುದು ಸರ್ವೇ ಸಾಮಾನ್ಯ. ಹಾಗಾಗಿ ರೇಂಜರ್ಸ್ ಘಟಕದಲ್ಲಿ ಸೇವಾ ಮನೋಭಾವವದಿಂದ ತೊಡಗಿಸಿಕೊಂಡು, ಮುಂದಿನ ಪೀಳಿಗೆಗೂ ಕೂಡಾ ಪ್ರೇರಣೆಯಾಗಿ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಸಿಗುವ ಹತ್ತು ಹಲವು ಚಟುವಟಿಕೆಗಳು ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ. ಪ್ರತಿ ಶಾಲಾ ಕಾಲೇಜುಗಳಲ್ಲಿ ಕೂಡಾ ಸ್ಕೌಟ್ಸ್ ಮತ್ತು ಗೈಡ್ಸ್, ರೇಂಜರ್ಸ್ ರೋವರ್ಸ್, ಕಬ್ಸ್- ಬುಲ್‌ಬುಲ್ಸ್ ಘಟಕಗಳನ್ನು ಪ್ರಾರಂಭಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್. ಕೆ. ಮಾತನಾಡಿ, ಕರ್ನಾಟಕದಲ್ಲೇ ಮೊದಲ ಬಾರಿಗೆ ಬಿ.ಎಡ್ ಕಾಲೇಜಿನಲ್ಲಿ ರೇಂಜರ್ಸ್ ಘಟಕವನ್ನು ಪ್ರಾರಂಭಿಸಿದ ಹೆಮ್ಮೆ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ. ಒಂದೇ ವಿದ್ಯಾಸಂಸ್ಥೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಏಳು ಘಟಕಗಳನ್ನು ಸ್ಥಾಪಿಸಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಆಳ್ವಾಸ್ ಶಿಕ್ಷಣ ಸಂಸ್ಥೆಯು ಕಾರಣವಾಗಿದೆ. ಸ್ಕೌಟಿಂಗ್‌ನ ಮುಖ್ಯ ದ್ಯೇಯವೇ ಸೇವೆ. ಅದನ್ನು ಅರಿತು ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಒಳ್ಳೆ ಶಿಕ್ಷಕರಾಗಲು ಸಾಧ್ಯ ಎಂದರು.
ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ, ಸಮಾಜದಲ್ಲಿ ಗೌರವಯುತ ವೃತ್ತಿ ಅಂದರೆ ಅದು ಶಿಕ್ಷಕ ವೃತ್ತಿ. ಪ್ರಶಿಕ್ಷಾಣಾರ್ಥಿಗಳು ರೇಂಜರ್ಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮುಂದೆ ವೃತ್ತಿ ಜೀವನದಲ್ಲಿ ವಿದ್ಯಾರ್ಥಿಗಳು ಕೂಡಾ ನಿಮ್ಮನ್ನು ಅನುಸರಿಸುತ್ತಾರೆ. ನಿಮ್ಮ ವ್ಯಕ್ತಿತ್ವ ನೀವು ಕಲಿತ ವಿದ್ಯಾಸಂಸ್ಥೆಯಿಂದ ರೂಪುಗೊಳ್ಳುತ್ತದೆ ಅದು ನಿಮ್ಮನ್ನು ಉನ್ನತ ಸ್ಥಾನಕ್ಕೆ ಒಯ್ಯಬಲ್ಲದು. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಚಿಂತನೆಯನ್ನು ಮೂಡಿಸುವಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವರ ಕೊಡುಗೆ ಮಹತ್ತರವಾದದ್ದು ಎಂದರು.
ರೋಬರ್ಟ್ ಬೈಡನ್ ಪವೆಲ್ ಎಂಬ ಮಹಾನ್ ವ್ಯಕ್ತಿಯಿಂದ 1907 ರಲ್ಲಿ ಇಂಗ್ಲೆಂಡಿನಲ್ಲಿ ಸ್ಕೌಟಿಂಗ್ ಚಳವಳಿ ಪ್ರಾರಂಭವಾಯಿತು. ಬೈಡನ್ ಪವೆಲ್ 1908ರಲ್ಲಿ ಬರೆದ ’ಸ್ಕೌಟಿಂಗ್ ಫಾರ್ ಬಾಯ್ಸ್” ಎಂಬ ಪುಸ್ತಕವು ಆ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಬೈಬಲ್‌ನ ನಂತರದ ಅತಿ ಹೆಚ್ಚು ಮಾರಾಟವಾದ ಪುಸ್ತಕವಾಗಿತ್ತು. ಈ ಪುಸ್ತಕವು ಯುವಜನತೆಗೆ ರಾ?ಭಕ್ತಿ, ಸ್ವಸಹಾಯ, ಪ್ರಕೃತಿ ಪ್ರೀತಿಯ ಮಹತ್ವ ಮತ್ತು ಸಮಾಜ ಸೇವೆಯ ಆದರ್ಶಗಳನ್ನು ಕಲಿಸಿತು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಹಾಗೂ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಂಕರಮೂರ್ತಿ ಎಚ್. ಕೆ. ಉಪಸ್ಥಿತರಿದ್ದರು.
ರೇಂಜರ್ಸ್ ಘಟಕದ ವಿದ್ಯಾರ್ಥಿನಿ ಸುಷ್ಮಿತಾ ನಿರೂಪಿಸಿ, ಕಲ್ಪನಾ ಎನ್. ರಾವ್ ಸ್ವಾಗತಿಸಿ, ಪ್ರಗತಿ ವಂದನಾರ್ಪಣೆ ಸಲ್ಲಿಸಿದರು.















