ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಾಳಾವರ ವರದರಾಜ್ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೋಟೇಶ್ವರ ಇಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಉಡುಪಿ ಮತ್ತು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ವತಿಯಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯ ಕುರಿತು ಪ್ರಚಾರ ಮತ್ತು ನೋಂದಣಿ ಅಭಿಯಾನವನ್ನು ಕೈಗೊಳ್ಳಲಾಯಿತು.
ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಸರ್ಕಾರದ ಈ ಯೋಜನೆ ನಿರುದ್ಯೋಗಿ ಯುವಪೀಳಿಗೆಗೆ ತುಂಬಾ ಅನುಕೂಲಕರವಾಗಿದೆ ಪದವಿ ಮುಗಿದು ಉದ್ಯೋಗ ಸಿಗದ ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಉದ್ಯೋಗ ವಿನಿಮಯ ಕಛೇರಿಯ ಸಿಬ್ಬಂದಿ ದೀಕ್ಷಿತ್ ಅವರು ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆ ಪಡೆದುಕೊಳ್ಳುವ ಬಗೆ ಮತ್ತು ಮಾನದಂಡಗಳ ಕುರಿತು ಪೂರ್ಣ ಮಾಹಿತಿ ನೀಡಿದರು.

ಪ್ರಾಶುಪಾಲರಾದ ರಾಮರಾಯ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸದಸ್ಯರಾದ ಝಾಹಿರ್ ಮತ್ತು ಕಾಲೇಜಿನ ಉಪನ್ಯಾಸಕರಾದ ಡಾ. ಶೇಖರ್ ಬಿ., ಕಾರ್ತಿಕ್ ಪೈ ಉಪಸ್ಥಿತರಿದ್ದರು.
ರಶ್ಮಿ ಕಾರ್ಯಕ್ರಮ ನಿರೂಪಿಸಿ, ಅಸಿಸ್ಟೆಂಟ್ ಪ್ರೊಫೆಸರ್ ರಂಜಿತ್ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಚೈತನ್ಯ ವಂದಿಸಿದರು.