ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯ ಶಾಲಾ ಕಾಲೇಜುಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವಿದೆ. ಈ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ, ಮುಂಗಟ್ಟುಗಳ ಪರವಾನಿಗೆ ರದ್ದುಪಡಿಸಲು ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾ ಕುಮಾರಿ ಸೂಚನೆ ನೀಡಿದರು.
ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕೋಟ್ಪಾ-2003 ಕಾಯಿದೆಯ ಕುರಿತ ತ್ರೆöÊಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋಟ್ಪಾ ಕಾಯಿದೆ ಅನ್ವಯ ಶಾಲಾ-ಕಾಲೇಜುಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂಬ ನಿಯಮವಿದ್ದರೂ ಸಹ ಜಿಲ್ಲೆಯ 38 ಶಾಲಾ-ಕಾಲೇಜುಗಳ ನಿಷೇಧಿತ ವ್ಯಾಪ್ತಿಯಲ್ಲಿಯೇ ಇವುಗಳ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳೂ ಕೇಳಿ ಬಂದಿವೆ. ಈ ಬಗ್ಗೆ ಕೂಡಲೇ ಕ್ರಮವಹಿಸಬೇಕು. ಈಗಾಗಲೇ ಮಣಿಪಾಲದ 11, ಬೈಂದೂರಿನ ತಾಲೂಕಿನ 1 ಕಡೆ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿಗಳ ಲೈಸೆನ್ಸ್ಗಳನ್ನು ರದ್ದುಪಡಿಸಲಾಗಿದೆ. ಬಾಕಿ ಉಳಿದ ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಈಗಾಗಲೆ ಕೋಡಿಬೆಂಗ್ರೆ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ. ಜಿಲ್ಲೆಯ ಉಳಿದ ಗ್ರಾಮಗಳಲ್ಲಿಯೂ ಸಹ ತಂಬಾಕು ಮುಕ್ತ ಗ್ರಾಮಗಳನ್ನಾಗಿಸಲು ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತಿಯ ಜನಪ್ರತಿನಿಧಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಹಕರಿಸಬೇಕು ಎಂದ ಅವರು, ಜಿಲ್ಲೆಯ ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚು ಮನೆಗಳಿದ್ದು, ಅವುಗಳನ್ನು ತಂಬಾಕು ಮುಕ್ತ ಅಪಾರ್ಟ್ಮೆಂಟ್‌ಗಳೆಂದು ಘೋಷಿಸಲಾಗುತ್ತಿದೆ. ಈಗಾಗಲೇ ಉಡುಪಿ ತಾಲೂಕಿನ ಕ್ಲಾಸಿಕಲ್ ನೆಸ್ಟ್, ಕಾರ್ಕಳದ ಪಂಚಮಿ ರೆಸಿಡೆನ್ಸಿ ಮತ್ತು ಗಂಗಾ ಪ್ಯಾರಡೈಸ್‌ಗಳನ್ನು ತಂಬಾಕು ಮುಕ್ತ ಅಪಾರ್ಟ್ಮೆಂಟ್‌ಗಳೆಂದು ಘೋಷಿಸಿ, ಪ್ರಮಾಣಪತ್ರ ನೀಡಲಾಗಿದೆ ಎಂದರು.
ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳು ಪ್ರತ್ಯೇಕ ಪರವಾನಿಗೆಯನ್ನು ಹೊಂದಿರಬೇಕು. ತಂಬಾಕಿನಂತಹ ಉತ್ಪನ್ನಗಳ ಬಳಕೆಯು ಮಕ್ಕಳ ಜೀವನವನ್ನೇ ಹಾಳುಮಾಡುವುದರಿಂದ ಇವುಗಳ ಬಳಸದಂತೆ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು ಎಂದ ಅವರು, ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದರು.
ಜಿಲ್ಲೆಯಲ್ಲಿ 2025 ರ ಏಪ್ರಿಲ್ ಮಾಹೆಯಲ್ಲಿ 5 ಕ್ಕೂ ಹೆಚ್ಚು ಧಿಡೀರ್ ದಾಳಿಗಳನ್ನು ನಡೆಸಿ, ಸೆಕ್ಷನ್ 4, ಸೆಕ್ಷನ್ 6(ಎ), 6(ಬಿ) ಅಡಿಯಲ್ಲಿ 71 ಕ್ಕೂ ಹೆಚ್ಚು ಪ್ರಕರಣವನ್ನು ದಾಖಲಿಸಿಕೊಂಡು 11,400 ರೂ ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿಯೂ ಸಹ ಕೋಟ್ಪಾ ಕಾಯಿದೆಯನ್ನು ಉಲ್ಲಂಘಿಸಿದ 11 ಪ್ರಕರಣಗಳಿಂದ 1100 ರೂ. ದಂಡ ವಸೂಲಿ ಮಾಡಲಾಗಿದೆ ಎಂದ ಅವರು, ದಾಳಿಗಳನ್ನು ನಿರಂತರವಾಗಿ ಆಗಿಂದಾಗ್ಗೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ಎ.ಎಸ್.ಪಿ ಪಿ.ಎ ಹೆಗಡೆ, ಡಿ.ಎಫ್.ಓ ಗಣಪತಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.