ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸತತ 3 ವರ್ಷ ಪದಕ ಪಡೆಯಲಾಗಲಿಲ್ಲ. ಕಳೆದ ಬಾರಿ ಜಮ್ಮುವಿನಲ್ಲಿ ಕಂಚಿನ ಪದಕ ಬಂದಿತ್ತು. ಈ ಬಾರಿ ಚಿನ್ನ ಬಂದಿದೆ. ಪರಿಶ್ರಮ ಮುಖ್ಯ. ದೇವರ ಮೇಲೆ ಭಾರ ಹಾಕಿದರೆ ಸಾಲದು, ಶ್ರಮವೂ ಮುಖ್ಯ ಆಗುತ್ತದೆ ಎಂದು ಪವರ್ ಲಿಪ್ಟರ್ ನಾಗಶ್ರೀ ಗಣೇಶ ಶೇರುಗಾರ್ ಹೇಳಿದರು.
ಅವರು ಗುರುವಾರದಂದು ಇಲ್ಲಿನ ಶ್ರೀರಾಮ ಮಂದಿರದಲ್ಲಿ ಉತ್ತರಖಂಡದಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ 3 ಚಿನ್ನ ಒಂದು ರಜತ ಪದಕ ಪಡೆದು ಏಷ್ಯನ್ ಯೂನಿವರ್ಸಿಟಿ ಚಾಂಪಿಯನ್ ಆದ ಪ್ರಯುಕ್ತ ನಡೆದ ಸಮ್ಮಾನ, ಪುರಮೆರವಣಿಗೆ ಸಂದರ್ಭದಲ್ಲಿ ಮಾತನಾಡಿದರು.

ರಾಮ ಕ್ಷತ್ರಿಯ ಸಂಘದ ಅಧ್ಯಕ್ಷ ಲಕ್ಷ್ಮೀಶ ಹವಾಲ್ದಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಸಾಧಕರಿಗೆ ಪ್ರೋತ್ಸಾಹ ಕೊಡುವುದು ಎಲ್ಲರ ಆದ್ಯ ಕರ್ತವ್ಯ ಎಂದರು.
ಕಾರ್ಯದರ್ಶಿ ನಾಗರಾಜ ನಾಯ್ಕ್, ರಕ್ಷಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಬೆಟ್ಟಿನ್, ರಾಮ ಕ್ಷತ್ರಿಯ ಯುವಕ ಮಂಡಳಿ ಅಧ್ಯಕ್ಷ ರಾಜೇಶ್ ರಾವ್, ಕಾರ್ಯದರ್ಶಿ ಅನಿಲ್ ಕುಮಾರ್ ಯು. ಕೆ., ಮಹಿಳಾ ಮಂಡಳಿ ಅಧ್ಯಕ್ಷೆ ಸರೋಜಾ ಅರುಣ್ ಕುಮಾರ್, ವಿಶ್ವರಾಮ ಕ್ಷತ್ರಿಯ ಸಂಘದ ಕಾರ್ಯಾಧ್ಯಕ್ಷ ನಾಗರಾಜ ಕಾಮಧೇನು, ಪುರಸಭೆ ಸದಸ್ಯೆ ದೇವಕಿಸಣ್ಣಯ್ಯ, ರಕ್ಷಾ ಚಾರಿಟೆಬಲ್ ಟ್ರಸ್ಟ್ ಸದಸ್ಯ ಕಲ್ಪತರು ಚಂದ್ರಶೇಖರ ರಾವ್, ಲಾವಣ್ಯ ಶೇರುಗಾರ್, ಪ್ರೇಮಾ ಗಣೇಶ ಶೇರುಗಾರ್ ಇದ್ದರು.
ನಾಗರಾಜ್ ನಾಯ್ಕ್ ಸ್ವಾಗತಿಸಿ, ಮಧುಸೂದನ ಉಪ್ಪಿನಕುದ್ರು ನಿರ್ವಹಿಸಿದರು. ಶ್ರೀರಾಮ ಹೆಗ್ಡೆ ವಂದಿಸಿದರು. ಉತ್ತರಾಖಂಡದಿಂದ ಆಗಮಿಸಿದ ನಾಗಶ್ರೀಗೆ ಶ್ರೀರಾಮ ಮಂದಿರಕ್ಕೆ ಚೆಂಡೆ ಮೇಳದೊಂದಿಗೆ ಸ್ವಾಗತ ಕೋರಲಾಯಿತು. ಶ್ರೀರಾಮ ಮಂದಿರದಿಂದ ಉಪ್ಪಿನಕುದ್ರುವರೆಗೆ ಮೆರವಣಿಗೆ ನಡೆಯಿತು. ರಾಮ ಕ್ಷತ್ರಿಯ ಸಂಘ, ರಕ್ಷಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಪ್ರತ್ಯೇಕವಾಗಿ ಸಮ್ಮಾನಿಸಲಾಯಿತು.