ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಸಂಸ್ಕೃತ ಸಂಘದ ಆಶ್ರಯದಲ್ಲಿ ಶ್ರೀ ಸುರಸರಸ್ವತಿ ಸಭಾ ಶೃಂಗೇರಿ ಅವರು ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಪ್ರಥಮ, ದ್ವಿತೀಯ, ತೃತೀಯ, ತುರೀಯಾ ಹಾಗೂ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಕ್ತನ ಸಂಸ್ಕೃತ ವಿದ್ಯಾರ್ಥಿನಿಯಾದ ಯು. ಸಂಗೀತ ಶೆಣೈ ಅವರು ಮಾತನಾಡಿ, “ನನಗೆ ಸಂಸ್ಕೃತ ವಿಭಾಗವೆಂದರೆ ತವರುಮನೆ ಇದ್ದ ಹಾಗೆ. ಸಂಸ್ಕೃತ ಉಪನ್ಯಾಸಕಿಯರು ನನ್ನನ್ನು ಎಲ್ಲಾ ವಿಷಯಗಳಲ್ಲೂ ಪ್ರೋತ್ಸಾಹಿಸುತ್ತಿದ್ದರು ಹಾಗೂ ಸಂಸ್ಕೃತ ತರಗತಿಗಳಲ್ಲಿ ಅನೇಕ ಪಠ್ಯ ಹಾಗೂ ಪಠ್ಯೇತರ ವಿಷಯಗಳನ್ನು ಚರ್ಚಿಸುತ್ತಿದ್ದೆವು” ಎಂದು ಕಾಲೇಜಿನ ಕುರಿತು ವಿಶೇಷವಾಗಿ ಸಂಸ್ಕೃತ ವಿಭಾಗದ ಕುರಿತು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಅವರು ಮಾತನಾಡಿ, “ಸಂಸ್ಕೃತ ದೇಶದ ಭಾಷೆಯಾಗಿದೆ, ಎಲ್ಲಾ ಭಾಷೆಗಳ ಮೂಲ ಸಂಸ್ಕೃತ ಭಾಷೆ ಹಾಗೂ ನಮ್ಮ ಅನೇಕ ಸಂಸ್ಕೃತಿಗಳು ಉಳಿದಿರಲು ಮೂಲ ಕಾರಣವಾದ ಸಂಸ್ಕೃತ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಸಹಕರಿಸಬೇಕು” ಹಾಗೂ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಸತ್ಯ ನಾರಾಯಣ ಹತ್ವಾರ್, ಸಂಸ್ಕೃತ ವಿಭಾಗದ ಮುಖ್ಯಸ್ಥೆ ಡಾ. ಯಶವಂತಿ ಕೆ., ಸಂಸ್ಕೃತ ವಿಭಾಗದ ಉಪನ್ಯಾಸಕಿಯರಾದ ಗಾಯತ್ರಿ ಮತ್ತು ಸ್ವಸ್ತಿಶ್ರೀ ಹಾಗೂ ಗಣಿತ ವಿಭಾಗದ ಮುಖ್ಯಸ್ಥೆ ವೈಷ್ಣವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಕೃತ ಸಂಘದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅಧಿತಿ ಹೊಳ್ಳ, ಶ್ರದ್ಧಾ ಹಾಗೂ ಅನಘ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳ ಹೆಸರನ್ನು ಓದಿದರು. ಪಂಚಮಿ, ಪಲ್ಲವಿ, ಶ್ರೀಲತಾ ಹಾಗೂ ಸಿಂಚನಾ ಪ್ರಾರ್ಥನೆ ಮಾಡಿದರು. ಧೃತಿ ಬಿ. ಗೌಡ ಕಾರ್ಯಕ್ರಮ ನಿರೂಪಿಸಿ, ಎನ್. ಶ್ರೀಲತಾ.ವಿ. ನಾಯಕ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳು ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು.














