ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶತಮಾನೋತ್ಸವ ಕಂಡ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರತಿವರ್ಷ ಹಳೆ ವಿದ್ಯಾರ್ಥಿಗಳ ಕೊಡುಗೆ ಒಂದಕ್ಕಿಂತ ಒಂದು ಹೆಚ್ಚು, ಶಿಕ್ಷಣಕ್ಕೆ ಆದ್ಯತೆ ನೀಡಿ ನಾವು ಓದಿದ ಶಾಲೆ ಎಂಬ ಪ್ರೀತಿಯಿಂದ ಹಳೆ ವಿದ್ಯಾರ್ಥಿಗಳು ಶಾಲೆಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಹಕರಿಸುತ್ತಿರುವುದು ಶ್ಲಾಘನೀಯ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಅವರು ಇಲ್ಲಿನ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ರಜತ ಮಹೋತ್ಸವದ ನೆನಪಿಗಾಗಿ ನಿರ್ಮಿಸಲಾಗಿರುವ ಎರಡು ನೂತನ ತರಗತಿ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಯನ್ನು ಹೇಗೆ ಮಾಡಿ ತೋರಿಸಬಹುದು ಎಂಬುದಕ್ಕೆ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿದರ್ಶನ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 50ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳು ಸುಮಾರು 50 ಇದ್ದರೆ, 6-7 ಮಕ್ಕಳಿರುವ ಶಾಲೆಗಳಿವೆ. ಇಂತಹ ಸಂದರ್ಭದಲ್ಲಿ ಬೈಂದೂರು ವಲಯದಲ್ಲಿ ಅತೀ ಹೆಚ್ಚು ಮಕ್ಕಳ ದಾಖಲಾತಿ ಹೊಂದಿರುವ ಗುಜ್ಜಾಡಿ ಶಾಲೆ ಬೇರೆ ಶಾಲೆಗಳಿಗೆ ಮಾದರಿಯಾಗಿದೆ ಎಂದರು.
ಕಳೆದ 25 ವರ್ಷಗಳ ಹಿಂದೆ ಪ್ರಾರಂಭಗೊಂಡ ಹಳೆ ವಿದ್ಯಾರ್ಥಿ ಸಂಘ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಸುಸಜ್ಜಿತ ವ್ಯವಸ್ಥೆಯೊಂದಿಗೆ ಪ್ರಾರಂಭಿ ಮುನ್ನಡೆಸಿಕೊಂಡು ಬರುತ್ತಿರುವುದರ ಜೊತೆಗೆ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ, ಎಸ್‌ಡಿಎಂಸಿಗೆ ಸಹಕಾರ ನೀಡುತ್ತಾ ಗುಣಮಟ್ಟದ ಶಿಕ್ಷಣದ ನಿರೀಕ್ಷೆಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿರುವುದು ಅಭಿನಂದನೀಯ ಎಂದು ಅವರು ಶ್ಲಾಘಿಸಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್ ಅಧ್ಯಕ್ಷತೆ ವಹಿಸಿದ್ದರು. ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷ ಉಮೇಶ ಎಲ್. ಮೇಸ್ತ, ಬಳ್ಳಾರಿಯ ಉದ್ಯಮಿ ಪದ್ಮನಾಭ ಕೊತ್ವಾಲ್, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ಪತ್ರಕರ್ತ ಬಿ. ರಾಘವೇಂದ್ರ ಪೈ, ಶಾಲೆಯ ಹಳೆ ವಿದ್ಯಾರ್ಥಿಗಳಾದ ಡಾ. ಸುಬ್ಬುಲಕ್ಷ್ಮೀ ಎನ್. ಕಾರಂತ್, ವಿದ್ಯಾಲಕ್ಷ್ಮೀ ಶರತ್ ಕೊಠಾರಿ, ರಾಷ್ಟ್ರೀಯ ಈಜು ಪಟು ನಾಗರಾಜ ಖಾರ್ವಿ ಶುಭ ಹಾರೈಸಿದರು.
ಇದೇ ಸಂದರ್ಭ ದಾನಿಗಳನ್ನು ಹಾಗೂ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರನ್ನು ಗೌರವಿಸಲಾಯಿತು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕೆ., ಶಾಲೆಯ ಮುಖ್ಯೋಪಾಧ್ಯಾಯ ಗಂಗಾಧರ ಬಂಟ್, ದಾನಿ ಅಬ್ದುಲ್ ಸಲಾಂ, ಸಂಘದ ಕಾರ್ಯದರ್ಶಿ ರಾಘವೇಂದ್ರ ಡಿ. ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಆನಂದ ಜಿ. ದಾನಿಗಳ ಪಟ್ಟಿ ವಾಚಿಸಿದರು. ಸತ್ಯನಾ ಕೊಡೇರಿ ಕಾರ್ಯಕ್ರಮ ನಿರ್ವಹಿಸಿದರು. ಸುನೀತಾ ಆರ್. ಪೂಜಾರಿ ಸ್ವಾಗತಿಸಿ, ಸಂಘದ ಖಜಾಂಚಿ ಪ್ರಕಾಶ್ ಎನ್.ಮೇಸ್ತ ವಂದಿಸಿದರು.















