ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದ ಜಿಎಸ್‌ಬಿ ಸಮಾಜದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಮೇ.20ರಿಂದ 26ರ ವರೆಗೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಪಂಚದಿನಾತ್ಮಕ ವಾಸ್ತವ್ಯವಿರಲಿದ್ದು, ದೇವಳದಲ್ಲಿ ನೂತನ ನಿರ್ಮಾಣದ ಶ್ರೀ ವಿದ್ಯಾಧಿರಾಜ ಸಭಾಗೃಹ ಹಾಗೂ ಇತರ ನೂತನ ಕೊಠಡಿಗಳನ್ನು ಶ್ರೀಗಳು ಉದ್ಘಾಟಿಸಲಿದ್ದಾರೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು. ರಾಜೇಶ ಪೈ ಹೇಳಿದರು.
ಮೇ.20ರಂದು ಸಂಜೆ ದೇವಳದ ಪರ್ಯಾಯ ಅರ್ಚಕ ಯು. ಚಂದ್ರಶೇಖರ ಭಟ್ ಮತ್ತು ವೈದಿಕ ತಂಡದವರಿಂದ ರಾಕ್ಷೋಘ್ನಹೋಮ, ಶುದ್ದಿಹೋಮ, ನವಗ್ರಹಯುಕ್ತ ವಾಸ್ತುಹವನ ನಡೆಯಲಿದೆ.
ಮೇ.21ರಂದು ಸಂಜೆ ಶ್ರೀ ಗುರುಗಳ ಆಗಮನ, ಪೂರ್ಣಕುಂಭ ಸ್ವಾಗತ, ವಿದ್ಯಾಧಿರಾಜ ಸಭಾಗೃಹ ಹಾಗೂ ಇತರ ನೂತನ ಕೊಠಡಿಗಳ ಉದ್ಘಾಟನೆ, ಪಾದಪೂಜೆ ನಂತರ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ.
ಮೇ.22ರಂದು ಬೆಳಿಗ್ಗೆ ಶ್ರೀ ದೇವರಿಗೆ ಹತಕಲಶಾಭಿಶೇಕ, ಮಹಾಪೂಜೆ, ಸಂಜೆ ಶ್ರೀ ರಾಮನಾಮ ಜಪ, ಭಜನೆ, ರಾತ್ರಿಪೂಜೆ. ನಂತರ ಶ್ರೀ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ, ರಾಮ ರಾಮ ಶ್ರೀರಾಮ ಪ್ರದರ್ಶನಗೊಳ್ಳಲಿದೆ.
ಮೇ.23ರಂದು ಏಕಾದಶಿ ಪ್ರಯುಕ್ತ ತಪ್ತ ಮುದ್ರಾಧಾರಣೆ, ಲಕ್ಷ ತುಳಸಿ ಅರ್ಚನೆ ಸೇವೆ ಮಧ್ಯಾಹ್ನ ಮಹಾಪೂಜೆ ಜರುಗಲಿದೆ. ಮೇ.24ರಂದು ಪ್ರಾಥಃಕಾಲ 3.00ರಿಂದ ಲಘು ವಿಷ್ಣುಹವನ, ಪೂರ್ಣಾಹುತಿ, ಮಧ್ಯಾಹ್ನ ಪೂಜೆ, ಸಂಜೆ ಶ್ರೀ ಗುರುಗಳ ದಿಗ್ವಿಜಯೋತ್ಸವ ಜರುಗಲಿದೆ.
ಮೇ.25ರಂದು ಬೆಳಿಗ್ಗೆ ವೇಂಕಟೇಶ ಮೂಲಮಂತ್ರ ಹವನ, ಪೂರ್ಣಾಹುತಿ, ಲಕ್ಷ ಕುಂಕುಮಾರ್ಚನೆ ಸೇವೆ, ಮಧ್ಯಾಹ್ನ ಪೂಜೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಮೇ.26ರಂದು ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ನಂತರ ಧಾರ್ಮಿಕ ಸಭೆ ನಡೆಯಲಿದ್ದು, ಸಭೆಯಲ್ಲಿ ವಿಶೇಷ ದಾನಿಗಳಿಗೆ ಗೌರವಾರ್ಪಣೆ, ಗುರುಗಳಿಂದ ಆಶೀರ್ವಚನ, ಫಲಮಂತ್ರಾಕ್ಷತೆ ನಡೆಯಲಿದೆ. ಮಧ್ಯಾಹ್ನ ಹತ್ತು ಸಮಸ್ಯರಿಂದ ಪಾದಪೂಜೆ ನಂತರ ಮುಂದಿನ ಮೊಕ್ಕಾಂಗಾಗಿ ಗುರುಗಳನ್ನು ಬೀಳ್ಕೊಡಲಾಗುವುದು ಎಂದು ರಾಜೇಶ ಪೈ ತಿಳಿಸಿದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳು ಕುಮಟಾದಲ್ಲಿ ಮೊಕ್ಕಾಂನಲ್ಲಿರುವ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಶ್ರೀಗಳ ಅನುಗ್ರಹ ಮಂತ್ರಾಕ್ಷತೆ ಪಡೆದರು.
ಈ ವೇಳೆ ಶ್ರೀಗಳು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು. ರಾಜೇಶ ಪೈ, ಖಜಾಂಚಿ ಮಂಜುನಾಥ ಮಹಾಲೆ, ಜತೆಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್, ನರಸಿಂಹ ಬಿ. ನಾಯಕ್ ಇದ್ದರು.















