ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವೈಯಕ್ತಿಕ ವಿಚಾರಗಳನ್ನು ಮೀರಿದ ಸಂಬಂಧವೇರ್ಪಡಿಸಿ ನಮ್ಮನ್ನು ಒಂದುಗೂಡಿಸುವ ಶಕ್ತಿ ಕಲೆ ಮತ್ತು ಸಾಹಿತ್ಯಕ್ಕಿದೆ. ತಾಯಿಯಂತಹ ಕರುಣೆ ಮತ್ತು ಮಗುವಿನಂತಹ ನಿಷ್ಕಪಟ ದೃಷ್ಠಿಯಿಂದ ನೋಡಿದರೆ ನಮಗೆ ಜಗತ್ತು ಸುಂದರ ಹಾಗೂ ಸನಿಹವಾಗುತ್ತದೆ. ಜಾತಿ, ಮತ, ಅಂತಸ್ತುಗಳ ನರಕದಿಂದ ಮೇಲೆತ್ತುವ ಸಾಮರ್ಥ್ಯ ಕೂಡ ಕಲೆಗಿದೆ ಎಂದು ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಹೇಳಿದರು.
ಅವರುಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ನಟರಾಜ ಡಾನ್ಸ್ ಕಂಪೆನಿಯ ಮೂರನೇ ವರ್ಷದ ಸಮ್ಮರ್ ಕ್ಯಾಂಪ್‌ನ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬೈಂದೂರು ಸಿಟಿ ಅಧ್ಯಕ್ಷ ರಾಜು ಮೊಗವೀರ ಮಾತನಾಡಿ, ಎಲ್ಲರೂ ಒಟ್ಟಾಗಿ ಕಲೆತು ಭಾಗವಹಿಸುವ ಇಂತಹ ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಏಕತಾ ಭಾವನೆ ಮೂಡಿಸುತ್ತದೆ. ಬದುಕಿನಲ್ಲಿ ದೊರೆತ ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಕ್ರೀಯಾತ್ಮಕ ಚಿಂತನೆಗಳಿಂದ ಹೊಸತನ ಕಾಣಲು ಸಾಧ್ಯವಿದೆ. ಕಲೆ, ಶಿಕ್ಷಣ ಎಲ್ಲದರ ಮೂಲ ಉದ್ದೇಶ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುವುದಾಗಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಪ್ರಗತಿಯ ಬಗ್ಗೆ ವಿಶೇಷ ಗಮನಹರಿಸಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಮೋಹನ ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿವಿಧ ಸ್ಪರ್ಧಾ ವಿಜೇತ ಮಕ್ಕಳು ಹಾಗೂ ಪಾಲಕರಿಗೆ ಬಹುಮಾನ ನೀಡಲಾಯಿತು.
ಲಾವಣ್ಯ ಅಧ್ಯಕ್ಷ ನರಸಿಂಹ ಬಿ. ನಾಯಕ್, ಜೆಸಿಐ ಡಾನ್ಸ್ ಕಂಪೆನಿ ಕೋರಿಯೋಗ್ರಾಫರ್ ನಟರಾಜ್ ಇದ್ದರು. ಕಿರಣ್ ಬಿಜೂರು ಕಾರ್ಯಕ್ರಮ ನಿರ್ವಹಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ವೈಭವ ನಡೆಯಿತು.
ಭಾರತೀಯ ಕಲೆ ಮತ್ತು ಸಾಹಿತ್ಯಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಂತಹ ಗಟ್ಟಿ ಬೇರನ್ನು ಹೊಂದಿದೆ. ಇಂದಿನ ಪೀಳಿಗೆ ಕಲೆಯನ್ನು ಮುಂದುವರಿಸುತ್ತಾರೋ ಬಿಡುತ್ತಾರೋ ಎಂಬುದಕ್ಕಿಂತ ಅವುಗಳು ಅವರ ಮನಸ್ಸಿನೊಳಕ್ಕೆ ಹೊಕ್ಕು ಕೂರುತ್ತದೆ. ಶಿಕ್ಷಣವು ವ್ಯಕ್ತಿಯಲ್ಲಿ ಸಂಸ್ಕಾರ ಹಾಗೂ ಸ್ವಾಭಿಮಾನವನ್ನು ಬೆಳೆಸುತ್ತದೆ. ಶಿಕ್ಷಣದ ಜೊತೆಗೆ ಕಲಾಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಆತ ಮತ್ತಷ್ಟು ಕ್ರೀಯಾಶೀಲನಾಗುತ್ತಾನೆ- ರೋಟರಿ ಕ್ಲಬ್ ಅಧ್ಯಕ್ಷ ಮೋಹನ ರೇವಣ್ಕರ್















