ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ತಾಲೂಕಿನ ಸಿದ್ದಾಪುರ ಗ್ರಾಮದ ಕೊಡ್ಸನಬೇರು ಎಂಬಲ್ಲಿ ಪಿಕ್‌ಅಪ್ ವಾಹನವೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮೃತರನ್ನು ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಸುರೇಶ್ ಕುಮಾರ್(61) ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದ ಇವರ ಅಣ್ಣ ಡಾ. ಸುನೀತ್ ಕುಮಾರ್, ತಂಗಿ ಸುಜಾತ ಹಾಗೂ ತಂಗಿ ಮಗಳು ಶ್ರೀಲಕ್ಷ್ಮೀ ಎಂಬವರು ಗಾಯಗೊಂಡಿದ್ದು, ಇವರಲ್ಲಿ ಸುಜಾತ ಹಾಗೂ ಶ್ರೀಲಕ್ಷ್ಮೀ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರೆಲ್ಲ ಡಾ. ಸುನೀತ್ ಕುಮಾರ್ ಮಗನ ಮದುವೆಯ ಬೀಗರ ಊಟ ಕಾರ್ಯಕ್ರಮಕ್ಕೆ ಸಾಗರದ ಸಿಂಗಧೂರು ಎಂಬಲ್ಲಿಗೆ ಹೊರಟಿದ್ದು ಕಾರನ್ನು ಪರೀಕ್ಷಿತ್ ಚಲಾಯಿಸುತ್ತಿದ್ದರು. ಸಿದ್ದಾಪುರದಲ್ಲಿ ಉಳಿದ ಎರಡು ಕಾರುಗಳನ್ನು ಕೂಡಿಕೊಂಡು ಸಾಗರದ ಕಡೆಗೆ ಹೋಗುತ್ತಿದ್ದಾಗ ಹೊಸಂಗಡಿ ಕಡೆಯಿಂದ ಬಂದ ಪಿಕ್‌ಅಪ್ ವಾಹನ ಕಾರಿಗೆ ಢಿಕ್ಕಿ ಹೊಡೆಯಿತು.
ಇದರ ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡಿದ್ದು, ಇದರಲ್ಲಿ ಗಂಭೀರವಾಗಿ ಗಾಯಗೊಂಡ ಸುರೇಶ್ ಕುಮಾರ್ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.