ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೌದ್ಧಿಕ ಚಟುವಟಿಕೆಗಿಂತ ಹೆಚ್ಚಾಗಿ ಪ್ರಾಪಂಚಿಕ ಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟು ದೇಶಭಕ್ತಿ, ತಾಯಿ-ತಂದೆ, ಗುರು ಹಿರಿಯರಿಗೆ ಗೌರವಕೊಡುವ ಸಂಸ್ಕೃತಿಯನ್ನು ಇಂದಿನ ಯುವಜನತೆ ಪಾಲಿಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದರು.
ಅವರು ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಅಂಚೆ ಕೋಟೇಶ್ವರ ಇಲ್ಲಿನ 18ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಪದವಿಯಿಂದ ಪುರುಷಾರ್ಥವಲ್ಲ, ಬದಲಿಗೆ ನಮ್ಮ ವ್ಯಕ್ತಿತ್ವದಿಂದಲೇ ನಾವು ಪಡೆದ ಜ್ಞಾನದ ಬೆಳಕು ನಮ್ಮ ಬದುಕನ್ನು ಬೆಳಗುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಧೈರ್ಯ ಗುಂದದೆ ಆತ್ಮವಿಶ್ವಾಸದಿಂದ ಮುನ್ನುಗ್ಗಿ ಕಷ್ಟದ ದಾರಿಯನ್ನು ತಾಳ್ಮೆಯಿಂದ ಕ್ರಮಿಸಬೇಕು. ಸೂಕ್ತ ನಿರ್ಧಾರ ತೆಗೆದುಕೊಂಡು ಜೀವನೋತ್ಸಾಹದಿಂದ ಆತ್ಮ ಗೌರವವನ್ನು ವೃದ್ಧಿಸಿಕೊಳ್ಳಬೇಕು. ನಮ್ಮ ಬದುಕನ್ನು ಬದಲಾಯಿಸಿಕೊಳ್ಳುವ ಬಲ ನಮ್ಮೊಳಗೇ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಮಾತನಾಡಿ, ಶಿಕ್ಷಣವೆಂದರೆ ಮಾನವರಲ್ಲಿ ಸಹಜವಾಗಿ ಅಡಗಿರುವ ಪರಿಪೂರ್ಣತೆಯನ್ನು ಪ್ರಕಾಶಿಸುವಂತೆ ಮಾಡುವುದಾಗಿದೆ. ನಿಮ್ಮೆಲ್ಲ ಕನಸುಗಳಿಗೆ ಬಣ್ಣ ತುಂಬಿ ಗುರಿ ಮತ್ತು ಪ್ರಯತ್ನದ ಮೂಲಕ ನಿಮ್ಮ ಏಳಿಗೆಗೆ ನೀವೇ ಶಿಲ್ಪಿಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಂಡಿಯನ್ ರೆಡ್‌ಕ್ರಾಸ್ ಕುಂದಾಪುರ ಘಟಕದ ಅಧ್ಯಕ್ಷರಾದ ಜಯಕರ್ ಶೆಟ್ಟಿ ಅವರು ರೂಪಾಯಿ ಒಂದು ಲಕ್ಷ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಿದರು.
ಕರ್ನಾಟಕ ಬ್ಯಾಂಕಿನ ಸಿಎಸ್‌ಆರ್ ನಿಧಿಯಿಂದ ಗಣಕವಿಜ್ಞಾನದ ಪ್ರಯೋಗಾಲಯಕ್ಕೆ ರೂಪಾಯಿ ನಾಲ್ಕು ಲಕ್ಷ ಹತ್ತು ಸಾವಿರ ಮೌಲ್ಯದ ಯುಪಿಎಸ್ ಬ್ಯಾಟರಿಯನ್ನು ಕರ್ನಾಟಕ ಬ್ಯಾಂಕ್ ವಿಭಾಗೀಯ ಕಛೇರಿ, ಉಡುಪಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಾದಿರಾಜ ಕೆ. ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಚೇತನ ಎಂ. ಅವರು ಪಿಹೆಚ್.ಡಿ ಪದವಿ ಪಡೆದಿದ್ದಕ್ಕಾಗಿ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಯಾದ ನಾಗರಾಜ ಪೂಜಾರಿ 2024 ನವೆಂಬರ್ ನಲ್ಲಿ ನಡೆದ ಭಾರತೀಯ ವಿಶ್ವ ಪರಿಶೋಧಕರ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದಕ್ಕಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಅರಣ್ಯ ಗುತ್ತಿಗೆದರರಾದ ಜೆ.ಪಿ. ಶೆಟ್ಟಿ ಕಟ್ಕೆರೆ ಕಾಲೇಜಿಗೆ ಸುಸಜ್ಜಿತ ರಂಗ ವೇದಿಕೆಯನ್ನು ವರದರಾಜ ಶೆಟ್ಟಿಯವರ ಸಹಕಾರದಿಂದ ನಿರ್ಮಾಣ ಮಾಡಿಕೊಡುವುದಾಗಿ ವಾಗ್ದಾನ ಮಾಡಿದರು.
ಶೈಕ್ಷಣಿಕ ವಿಭಾಗದ ಬಹುಮಾನದ ಪಟ್ಟಿಯನ್ನು ಗಣೇಶ ಪೈ ಎಂ, ವಿಶೇಷ ಸಾಧಕರ ಬಗ್ಗೆ ಸುಚಿತ್ರಾ ಇವರು ಓದಿದರು, ಗ್ರಂಥಾಲಯದ ಬಹುಮಾನಗಳ ಬಗ್ಗೆ ರವಿಚಂದ್ರ ಹೆಚ್.ಎಸ್., ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನಗಳ ಬಗ್ಗೆ ಡಾ. ಭಾಗೀರಥಿ ನಾಯ್ಕ ಮತ್ತು ವಿದ್ಯಾ, ಕ್ರೀಡಾ ವಿಭಾಗದ ಬಗ್ಗೆ ಕಿರಣ್ ವಿಷ್ಣು ಪಟಗಾರ, ರೋವರ್- ರೇಂಜರ್ ಬಹುಮಾನಗಳ ಬಗ್ಗೆ ತೇಜೇಶ್ ಕುಮಾರ್ ಎ.ಎಲ್. ಓದಿದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಭಾಕರ ಖಾರ್ವಿ ಹಾಗೂ ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ವಿಷಯದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳ ಯಾದಿಯನ್ನು ಪ್ರಜ್ವಲಾ ಮತ್ತು ರಸಾಯನಶಾಸ್ತ್ರ ವಿಷಯದ ಸಂಬಂಧಿಸಿದ ಬಹುಮಾನವನ್ನು ಅಮೃತಾ ವಾಚಿಸಿದರು. ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಪಟ್ಟಿಯನ್ನು ತಂಗಮ್ಮ ವಾಚಿಸಿದರು. ಶರಾವತಿ ಇತಿಹಾಸ ವಿಭಾಗ ಉಪನ್ಯಾಸಕರು ನಿರೂಪಿಸಿ, ವಿದ್ಯಾರ್ಥಿ ನಾಯಕ ನಿತಿನ್ ವಂದಿಸಿದರು.















