ಮೂಡುಬಿದಿರೆ: ಅಭಿವೃದ್ಧಿಯ ನೆಪದಲ್ಲಿ, ಅಭಿವೃದ್ಧಿಯ ಜಪದಲ್ಲಿ ನದಿ ಮೂಲ ಬಡವಾಗುತ್ತಿದೆ. ಜಲಮೂಲ ಬರಿದಾಗುತ್ತಿದೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಅಧ್ಯಯನಕ್ಕೊಳಪಟ್ಟ ನೀರು ಇಂದು ನಿರ್ಲಕ್ಷ್ಯದ ವಸ್ತುವಾಗಿದೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಹೊಳ್ಳ ವಿಷಾದ ವ್ಯಕ್ತಪಡಿಸಿದರು.
ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ನೀರಿನ ಬಳಕೆ ಮತ್ತು ಹಂಚಿಕೆ: ಹೊಸತನದ ಹುಡುಕಾಟ’ ಎಂಬ ವಿಷಯದಲ್ಲಿ ನೇತ್ರಾವತಿ ನದಿ ತಿರುವಿನ ಆತಂಕಗಳ ಕುರಿತು ಮಾತನಾಡಿದರು. ಹೊಳೆಯ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುವುದು ಎಂಬ ಮಾತೇ ಅರ್ಥಹೀನ. ನದಿ ಸಮುದ್ರ ಸೇರುವುದು ನೈಸರ್ಗಿಕ ವ್ಯವಸ್ಥೆ. ಈ ನೀರನ್ನು ತಿರುಗಿಸುತ್ತೇವೆ ಎನ್ನುವುದರಲ್ಲಿ ನಿಸರ್ಗದ ಮೇಲಿನ ಸವಾರಿಯಷ್ಟೇ. ಬಯಲುಸೀಮೆಯವರಿಗೆ ನೀರು ಕೊಡಲು ನಮ್ಮ ವಿರೋಧವಿಲ್ಲ. ಆದರೆ ನಮಗೇ ಸಾಲದಷ್ಟು ನೀರನ್ನು ಇತರರಿಗೆ ನೀಡುವುದಾದರೂ ಹೇಗೆ? 15ವರ್ಷದ ಹಿಂದಿನ ವರದಿಯನ್ನಿಟ್ಟುಕೊಂಡು ಯೋಜನೆಯನ್ನು ಜಾರಿಗೊಳಿಸಲು ಹೊರಟಿರುವುದು ದುಡ್ಡಿನ ರಾಜಕೀಯಕ್ಕೆ ತೋರಿಸುತ್ತದೆ. ನದಿಮೂಲಕ್ಕೆ ತೊಂದರೆ ಮಾಡಿದರೇ ಮುಂದೊಂದು ದಿನ ಯಾರಿಗೂ ನೀರಿಲ್ಲದ ಸ್ಥಿತಿ ಬರಲಿದೆ ಎಂದವರು ಹೇಳಿದರು.