ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ರಾಜ್ಯದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಕನ್ನಡ ಭಾಷೆ ಕಲಿತು ಗ್ರಾಹಕರೊಡನೆ ವ್ಯವಹಾರ ಮಾಡುವ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.
ಇತ್ತೀಚಿಗೆ ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಪ್ರಿಯಾಂಕ ಸಿಂಗ್ ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ, ಇದು ಭಾರತ ನಾನು ಹಿಂದಿಯಲ್ಲೇ ಮಾತನಾಡುತ್ತೇನೆ, ಬೇಕಿದ್ದರೆ ಬನ್ನಿ ಎಂದು ವಾದ ಮಾಡಿದ್ದು,ರಾಜ್ಯದ ಸರ್ವ ಕನ್ನಡಿಗರಿಗೆ ನೋವುಂಟು ಮಾಡಿದೆ. ಅಲ್ಲದೇ ಬ್ಯಾಂಕ್ ಮ್ಯಾನೇಜರ್ ಉದ್ಧಟತನದಿಂದ ಆಡಿದ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನಮಂತ್ರಿ ಹಲವಾರು ಬಾರಿ ಭಾಷೆಯ ಬಗ್ಗೆ ಪುನರುಚ್ಚರಿಸುತ್ತ, ಕೇಂದ್ರ ಸರಕಾರದ ಎಲ್ಲಾ ಕಚೇರಿಗಳಲ್ಲಿ ಸ್ಥಳೀಯ ಆಡಳಿತಾತ್ಮಕ ಭಾಷೆಯಲ್ಲಿಯೇ ವ್ಯವಹರಿಸಬೇಕೆಂದು ನಿರ್ದೇಶನ ನೀಡಿದ್ದರು. ಆದರೂ ರಾಷ್ಟ್ರೀಕೃತ ಬ್ಯಾಂಕಿನ ಸಿಬ್ಬಂದಿ ಕನ್ನಡದ ಬಗ್ಗೆ ಅಗೌರವವನ್ನು ತೋರಿ ಬ್ಯಾಂಕಿನ ಗ್ರಾಹಕರಿಗೆ ಕಿರುಕುಳವನ್ನು ಕೊಡುತ್ತಿರುವುದು ಬಹಳ ನೋವನ್ನುಂಟು ಮಾಡಿದೆ.
ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಸಿಬ್ಬಂದಿಗಳು ಅನ್ಯ ಭಾಷಿಕರಾದರೆ ವೃತ್ತಿಗೆ ಸೇರಿದ 6 ತಿಂಗಳೊಳಗೆ ಕಡ್ಡಾಯ ಕನ್ನಡ ಭಾಷೆಯನ್ನು ಕಲಿಯಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವುದು ಸೂಕ್ತ.
ಕನ್ನಡ ಕಲಿತು ವ್ಯವಹರಿಸದ ಸಿಬ್ಬಂದಿಯನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡುವ ಕಾನೂನು ಸಹ ತರಬೇಕು. ಹೀಗೆ ರಾಜ್ಯದಲ್ಲಿನ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಿಬ್ಬಂದಿ ಮತ್ತು ಪ್ರಬಂಧಕರು ಕನ್ನಡದಲ್ಲಿ ವ್ಯವಹರಿಸದೇ ಇರುವ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಂಡು ಕನ್ನಡ ಭಾಷೆಯಲ್ಲಿಯೇ ಗ್ರಾಹಕರೊಂದಿಗೆ ವ್ಯವಹರಿಸಲು ಆದೇಶ ಹೊರಡಿಸುವಂತೆ ಹಣಕಾಸು ಸಚಿವರನ್ನು ಪತ್ರದ ಮೂಲಕ ಕೋಟ ಶ್ರೀನಿವಾಸ ಪೂಜಾರಿ ವಿನಂತಿಸಿದ್ದಾರೆ.