ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತನ್ನ ಮನೆಯಲ್ಲಿ ಸಾಕಿ ಬೆಳಸಿದ ನಾಯಿಯನ್ನು ಬೈಕಿಗೆ ಸರಪಳಿಯಿಂದ ಕಟ್ಟಿ ಎಳೆದೊಯ್ಯುತ್ತಿದ್ದ ಆರೋಪಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಯಡ್ತರೆ ಗ್ರಾಮದ ರಾ.ಹೆ 66ರ ಬೈಂದೂರು – ಕುಂದಾಪುರ ಏಕಮುಖ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ರಾವುತನಕಟ್ಟೆಯಿಂದ ನಾಕಟ್ಟೆ ಸೇತುವೆಯವರೆಗೆ ಪಡುವರಿ ಗ್ರಾಮದ ನಿವಾಸಿಯೊಬ್ಬ ತನ್ನ ಮನೆಯ ಸಾಕು ನಾಯಿಯೊಂದನ್ನು ಆತನ ಬೈಕಿಗೆ ಸರಪಳಿಯಿಂದ ಕಟ್ಟಿ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವಿಡಿಯೋವನ್ನು ಪೊಲೀಸರು ಗಮನಿಸಿ, ಪರಿಶೀಲಿಸಿದಾಗ ವ್ಯಕ್ತಿಯ ಬೈಂದೂರು ಪಡುವರಿ ಗ್ರಾಮದ ಸುಬ್ರಹ್ಮಣ್ಯ ಎಂಬುದಾಗಿ ತಿಳಿದು ಬಂದಿದೆ. ಮೂಕಪ್ರಾಣಿಯನ್ನು ಈ ರೀತಿಯಾಗಿ ಹಿಂಸಾತ್ಮಕ ರೀತಿಯಲ್ಲಿ ಎಳೆದಾಡಿಕೊಂಡು ಹೋಗಿರುವುದರಿಂದ ನಾಯಿಯು ಗಾಯಗೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಅದರಂತೆ ಆರೋಪಿ ವಿರುದ್ಧ ಬೈಂದೂರು ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.