ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರಚಾರಕ್ಕಾಗಲೀ ವ್ಯವಹಾರದ ದೃಷ್ಠಿಯಿಂದಾಗಲೀ ಅಥವಾ ಇತರರು ಗುರುತಿಸಿ ಗೌರವಿಸಬೇಕೆಂಬ ಉದ್ದೇಶವಿಟ್ಟು ಮತ್ತು ಅಪಾತ್ರರಿಗೆ ಮಾಡಿದ ದಾನ ಶ್ರೇಷ್ಠವೆನಿಸದು. ಇದು ಕೇವಲ ಕಾಟಾಚಾರಕ್ಕಾಗಿ ಮಾತ್ರ ಸೀಮಿತವಾಗಿದ್ದು, ಏನೂ ಲಾಭವಾಗದು ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ಅವರು ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ಸಂಜೆ ನಡೆದ ಧಾರ್ಮಿಕ ಸಮಾರಂಭದಲ್ಲಿ ನೂತನ ಶ್ರೀ ವಿದ್ಯಾಧಿರಾಜ ಸಭಾಗೃಹ ಹಾಗೂ ಇತರೇ ಕಟ್ಟಡ ನಿರ್ಮಾಣಕ್ಕೆ ಆರ್ಥಿ ಸಹಕಾರ ನೀಡಿದ ದಾನಿಗಳನ್ನು ಅಭಿನಂದಿಸಿ ಮಾತನಾಡಿದರು.
ಹಿಂದು ಪರಂಪರೆಯಲ್ಲಿ ದಾನ, ಧರ್ಮಗಳ ಮೂಲಕ ಸತ್ಕರ್ಮಗಳನ್ನು ಮಾಡಬೇಕು ಎಂಬ ನಿಯಮವಿದೆ. ಅದು ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿಯೂ ಕೂಡ ಮಾಡಬಹುದಾಗಿದೆ. ಇಂದಿನ ಕಾಲಘಟ್ಟದಲ್ಲಿ ಈ ರೀತಿ ಗುಪ್ತವಾಗಿ ದಾನ ಮಾಡುವವರ ಸಂಖ್ಯೆ ಬಹಳ ವಿರಳ. ದೇವರಿಗೆ ಯಾವುದೇ ಅಪೇಕ್ಷೆ ಇಲ್ಲದಿದ್ದರೂ ಭಕ್ತರು ನಿಸ್ವಾರ್ಥ ಹಾಗೂ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಸತ್ಕಾರ್ಯಗಳಿಗೆ ದೇವರ ಕೃಪೆಯಿರುತ್ತದೆ. ಹಾಗೆಯೇ ದುಡಿಮೆಯ ಒಂದಂಶವನ್ನು ಸೇವಾ ಕಾರ್ಯದ ಮೂಲಕ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು. ರಾಜೇಶ ಪೈ ಹಾಗೂ ಸರ್ವ ಟ್ರಸ್ಟಿಗಳು, ಪೇಟೆ ಹತ್ತು ಸಮಸ್ತರು ಇದ್ದರು. ದೇವಸ್ಥಾನ ಟ್ರಸ್ಟ್ ಖಜಾಂಚಿ ಮಂಜುನಾಥ ಮಹಾಲೆ ಕಾರ್ಯಕ್ರಮ ನಿರ್ವಹಿಸಿದರು.
ಹೇಳಿಕೆ: ಸಮಾಜದಿಂದ ಪಡೆದಿದ್ದನ್ನು ಭಗವಂತನಿಗೆ ಮರುಪಾವತಿಸುವುದು ಎಂದರೆ ದೇವಾಲಯ ಜೀರ್ಣೋದ್ಧಾರ ಅಥವಾ ನಿರ್ಮಾಣವಾಗಿದೆ. ಹಾಗೆಯೇ ಹೆತ್ತವರನ್ನು ಕೂಡ ಕಡೆಗಣಿಸದಿರುವುದು ಭಗವಂತನ ಅನುಗ್ರಹ ಪಡೆಯುವ ಮಾರ್ಗವಾಗಿದೆ. ಇಂದಿನ ಕಾಲಘಟ್ಟದಲ್ಲಿ ಹಣಕ್ಕಿಂತ ಹೆಚ್ಚಾಗಿ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಅತೀ ಅಗತ್ಯವಾಗಿದ್ದು, ಧಾರ್ಮಿಕ ಆರಾಧನೆ ಮೂಲಕ ಅವುಗಳನ್ನು ಪಡೆಯಬಹುದು: ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ