ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರದಂದು ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಮಾರ್ಗದರ್ಶನ ಕಾರ್ಯಕ್ರಮವನ್ನು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಪದವಿಯ ನಂತರ ಉದ್ಯೋಗದಲ್ಲಿ ಪ್ರವೇಶಿಸಬೇಕೆ ಅಥವಾ ಹೆಚ್ಚಿನ ಅಧ್ಯಯನ ಮಾಡಬೇಕೆಂಬ ಮಹತ್ವದ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾಗಿ ಎಮ್‌ಐಟಿಇ. ಮೂಡಬಿದ್ರಿಯ ಉದ್ಯೋಗ, ತರಬೇತಿ ಮತ್ತು ಕೈಗಾರಿಕಾ ಸಂಬAಧಗಳ ನಿರ್ದೇಶಕ ನರೇಂದ್ರ ಯು. ಪಿ. ಹಾಗೂ ಎಮ್‌ಐಟಿ, ಮೂಡ್ಲಕಟ್ಟೆ, ಕುಂದಾಪುರದ ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದ ಮುಖ್ಯಸ್ಥೆಯಾದ ಹಾಗೂ ಸಹ ಪ್ರಾಧ್ಯಾಪಕೆಯಾಗಿರುವ ಡಾ. ಸುಚಿತ್ರಾ ದಿನೇಶ್ ಪೂಜಾರಿ ಅವರು ಭಾಗವಹಿಸಿದ್ದರು. ಅವರು ಉನ್ನತ ಅಧ್ಯಯನದ ಲಾಭಗಳನ್ನು, ಅದರ ಸದುಪಯೋಗಗಳು ಮತ್ತು ವೈಪರಿತ್ಯಗಳನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಸೂಕ್ತವಾದ ನಿರ್ಧಾರ ಕೈಗೊಳ್ಳುವಂತೆ ಪ್ರೇರೇಪಿಸಿದರು.
ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದ ಈ ಘಟ್ಟದಲ್ಲಿ ಸಮಚಿತ್ತದಿಂದ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಅಗತ್ಯತೆಯನ್ನು ವಿವರಿಸಿದರು. ಉಪ-ಪ್ರಾಂಶುಪಾಲರಾದ ಡಾ| ಚೇತನ ಶೆಟ್ಟಿ ಕೋವಾಡಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಎಮ್‌ಐಟಿಇ, ಮೂಡಬಿದ್ರಿ ಮತ್ತು ಎಮ್‌ಐಟಿ, ಮೂಡ್ಲಕಟ್ಟೆ, ಕುಂದಾಪುರದ ಪ್ಲೇಸ್ಮೆಂಟ್ ಸಂಯೋಜಕರು ಹಾಗೂ ಉಪನ್ಯಾಸಕರು ಸಹ ಭಾಗವಹಿಸಿದ್ದರು.
ಪ್ಲೇಸ್ಮೆಂಟ್ ಆಫೀಸರ್ ತಿಮ್ಮಪ್ಪ ಡಿ. ಎಸ್. ಸ್ವಾಗತಿಸಿ, ಡಾ. ಸುಚಿತ್ರಾ ಮತ್ತು ತಂಡದವರು ವಿದ್ಯಾರ್ಥಿಗಳಿಗೆ ಕ್ವಿಜ್ ಕಾರ್ಯಕ್ರಮವನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಸಹ ಪ್ರಾಧ್ಯಾಪಕರಾದ ಮಹೇಶ್ ಕುಮಾರ್ ವಂದಿಸಿದರು.















