ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿದ್ದ ಶಿಕ್ಷಕರು ಹಾಗೂ ರಾಷ್ಟ್ರ ಮಟ್ಟದ ವ್ಯಕ್ತಿತ್ವ ವಿಕಸನದ ತರಬೇತುದಾರರಾದ ರಾಜೇಂದ್ರ ಭಟ್. ಕೆ. ಪೋಷಕರನ್ನು ಉದ್ದೇಶಿಸಿ, ಪೋಷಕರು ತಮ್ಮ ಮಕ್ಕಳನ್ನು ಅತ್ಯುತ್ತಮ ರೀತಿಯಲ್ಲಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಮಕ್ಕಳು ಹೃದಯ ಶ್ರೀಮಂತಿಗೆ ಬೆಳೆಸಿಕೊಳ್ಳು ವಂತೆ ಮಾಡಿ, ಮಗುವಿನಲ್ಲಿ ಅಂಕ ಪಡೆಯುವುದಕ್ಕಿಂತ ಮುಖ್ಯವಾಗಿರುವುದು ಮಾನವೀಯ ಮೌಲ್ಯ. ಒತ್ತಡ ರಹಿತವಾಗಿ ಬದುಕುವ ವಾತಾವರಣ ವನ್ನು ಸೃಷ್ಟಿಸಿ ಎಂದು ಪೋಷಕರಿಗೆ ತಿಳಿಸಿದರು.
ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ ಎಂಡ್ ಕಲ್ಚರಲ್ ಟ್ರಸ್ಟ್ ನ ಅಧ್ಯಕ್ಷರಾದ ಕೆ. ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಟಾಪ್ 10 ಸ್ಥಾನದಲ್ಲಿ ರ್ಯಾಂಕ್ ಪಡೆದ ಹಾಗೂ ಕೆ- ಸಿಇಟಿ ಯಲ್ಲಿ 5000 ಒಳಗಡೆ ರ್ಯಾಂಕ್ ಪಡೆದ ಒಟ್ಟು 22 ವಿದ್ಯಾರ್ಥಿಗಳನ್ನು ಪೋಷಕರ ಸಮ್ಮುಖದಲ್ಲಿ ಬೆಳ್ಳಿಲೋಟ, ಬೆಳ್ಳಿ ನಾಣ್ಯ, ಫಲ, ಪುಷ್ಪ, ಶಾಲು ಹೊದಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ. ರಾಧಾ ಕೃಷ್ಣ ಶೆಣೈ, ಖಜಾಂಚಿ ಲಕ್ಷ್ಮಿ ನಾರಾಯಣ ಶೆಣೈ, ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜಯ್ ಕೋಟೆಗಾರ್, ಹಿರಿಯ ರಸಾಯನ ಶಾಸ್ತ್ರ ಉಪನ್ಯಾಸಕರಾದ ರಮಾಕಾಂತ್ ರೇವಣ್ಕ್‌ರ್, ಶ್ರೀ ವೆಂಕಟರಮಣ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜಾ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಪ್ರಸಕ್ತ ಶೈಕ್ಷಣಿಕ ಚಟುವಟಿಕೆಗಳ ಕುರಿತು ಪೋಷಕರಿಗೆ ಮಾಹಿತಿ ನೀಡಿದರು. ಇಂಗ್ಲೀಷ್ ಉಪನ್ಯಾಸಕಿ ಅಮೃತಾ ಸನ್ಮಾನಿತರ ಪಟ್ಟಿಯನ್ನು ವಾಚಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಮಂಜುನಾಥ್ ಅತಿಥಿಯನ್ನು ಪರಿಚಯಿಸಿದರು. ಕನ್ನಡ ಉಪನ್ಯಾಸಕಿ ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಉಪ ಪ್ರಾಂಶುಪಾಲರಾದ ಸುಜಯ್ ಕೋಟೆಗಾರ್ ಸ್ವಾಗತಿಸಿ, ಭೌತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಭರತ ಚಂದ್ರ ಕೆ. ವಂದಿಸಿದರು.















