ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸೈನಿಕರು ನಮ್ಮ ಜೀವನದ ಉಸಿರಿನಂತೆ. ನಮ್ಮ ಸುಂದರ ಬದುಕಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ವೀರ ಯೋಧರನ್ನು ನಮ್ಮ ನಿತ್ಯ ಜೀವನದಲ್ಲಿ ಸದಾ ಸ್ಮರಿಸುತ್ತಿರಬೇಕು ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಅಭಿಪ್ರಾಯಪಟ್ಟರು.
ಅವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೇಲ್ ಗಂಗೊಳ್ಳಿ, ಕಲಾಶ್ರೀ ಶಿಕ್ಷಣ ಪ್ರೇಮಿಗಳ ಬಳಗ ಗಂಗೊಳ್ಳಿ ಮತ್ತು ಸಂಜೀವ ಪಾರ್ವತಿ ಪ್ರಕಾಶನ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆದ ಸೈನಿಕ ನಮನ ಮತ್ತು ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಖಾರ್ವಿ, ಎಸ್ ಡಿಎಂಸಿ ಅಧ್ಯಕ್ಷೆ ಸವಿತಾ, ಅರ್ಚನಾ ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ ಆನಂದ, ಶ್ರೀ ಬಸವೇಶ್ವರ ದೇವಸ್ಥಾನದ ಅರ್ಚಕ ಜಗದೀಶ್, ಕಲಾಶ್ರೀ ಶಿಕ್ಷಣ ಪ್ರೇಮಿ ಬಳಗದ ಮುಖ್ಯಸ್ಥ ಈಶ್ವರ ಗಂಗೊಳ್ಳಿ, ಅಂಗನವಾಡಿ ಕಾರ್ಯಕರ್ತೆ ಸಹನಾ, ಪೋಷಕರಾದ ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರಿಗೆ ಪುಷ್ಪ ನುಡಿ ನಮನಗಳನ್ನು ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು ಮತ್ತು ಹೊಸ ವಿದ್ಯಾರ್ಥಿಗಳನ್ನು ಸಿಂಧೂರ ತಿಲಕವಿಟ್ಟು ಸ್ವಾಗತಿಸಲಾಯಿತು.
ಕಾರ್ಯಕ್ರಮವನ್ನು ಸಹ ಶಿಕ್ಷಕ ಯೋಗೀಶ್ ನಿರೂಪಿಸಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಗುರುರಾಜ ಆಚಾರ್ಯ ಅಥಿತಿಗಳನ್ನು ಸ್ವಾಗತಿಸಿ, ವಂದಿಸಿದರು.















