ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ವ್ಯಾಪ್ತಿಯ ಗ್ರಾಮೀಣ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಸಮರ್ಪಕ ಸಂಚಾರಕ್ಕಾಗಿ ಇಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣದ ಬೇಡಿಕೆಯಿದ್ದು, ಇಲ್ಲಿನ ನಿರ್ಮಾಣ ಹಂತದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಡಿಪೋ ಮಂಜೂರಾತಿಗಾಗಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ವತಿಯಿಂದ ಸಾರಿಗೆ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಹೇಳಿದರು.
ಅವರು ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೈಂದೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಂಡಿದೆ, ಆದರೆ ನಿಲ್ದಾಣದಲ್ಲಿ ನೀರಿನ ಸಮಸ್ಯೆಯಿಂದಾಗಿ ಉದ್ಘಾಟನಾ ಕಾರ್ಯ ವಿಳಂಬಗೊಳ್ಳುತ್ತಿದೆ, ಈ ಬಗ್ಗೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಭೆಯಲ್ಲಿಯೂ ಸಂಬಂದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ, ಇಲ್ಲಿಗೆ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲು ರಾಷ್ರೀಯ ಹೆದ್ದಾರಿ ಪ್ರಾದಿಕಾರದ ಅನುಮತಿ ಅಗತ್ಯವಿದೆ, ಈ ಬಗ್ಗೆ ಶೀಘ್ರ ಪ್ರಾದಿಕಾರದ ಒಪ್ಪಿಗೆ ಪಡೆದು ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದರು.
ಕೆಎಸ್‌ಆರ್‌ಟಿಸಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಫರ್ಮಿಟ್ ಹೊಂದಿರುವ ಗ್ರಾಮೀಣ ಭಾಗಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ತೊಡಕ್ಕಾಗಿದೆ, ಈ ಬಗ್ಗೆ ರಾಜ್ಯದಲ್ಲಿ ಈಗಾಗಲೇ ಚಾಲಕ, ನಿರ್ವಾಹಕ ಸಿಬ್ಬಂದಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಜೂನ್ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಂಡು ಸಿಬ್ಬಂದಿಗಳು ನಿಯೋಜನೆಗೊಳ್ಳಲಿದ್ದಾರೆ. ಆ ಬಳಿಕ ಪರ್ಮಿಟ್ ಹೊಂದಿರುವ ಗ್ರಾಮೀಣ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.
ಗ್ಯಾರಂಟಿಯಿಂದ 192.34 ಕೋಟಿ:
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಬೈಂದೂರು ತಾಲೂಕಿಗೆ ಇದುವರೆಗೆ ಸುಮಾರು 192.34 ಕೋಟಿ ರೂ. ವೆಚ್ಚಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ 102.14ಕೋಟಿ ಜಮಾ ಆಗಿದೆ. ಗೃಹ ಜ್ಯೋತಿ ಯೋಜನೆಯಿಂದ ಬೈಂದೂರು ಮೆಸ್ಕಾಂ ಉಪಕೇಂದ್ರ ವ್ಯಾಪ್ತಿಯ 27,942 ಕುಟುಂಬಗಳಿಗೆ 36.34 ಕೋಟಿ ರೂ., ತಲ್ಲೂರು ಮೆಸ್ಕಾಂ ಉಪ ಕೇಂದ್ರ ವ್ಯಾಪ್ತಿಯ 1935 ಕುಟುಂಬಗಳಿಗೆ 2.33 ಕೋಟಿ ರೂ. ಸೇರಿದಂತೆ ಸುಮಾರು 38.68 ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಡಿ 25,182 ಪಡಿತರ ಚೀಟಿಗಳಿಗೆ 1,89,26,610 ರೂ. ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಯುವ ನಿಧಿ ಯೋಜನೆಯಡಿ 342 ಫಲಾನುಭವಿಗಳಿಗೆ 59.34ಲಕ್ಷ ರೂ. ಜಮಾ ಆಗಿದೆ. ಶಕ್ತಿ ಯೋಜನೆಯಡಿ ಇದುವರೆಗೆ 1.36ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು 50.91ಕೋಟಿ ರೂ. ರಿಯಾಯಿತಿ ಪಡೆದಿದ್ದಾರೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ರಾಜಕುಮಾರ್. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಮಾಲತಿ ಶಿವಾನಂದ, ರಾಮ ಪೂಜಾರಿ, ಅನೀಶ್ ಪೂಜಾರಿ, ರಾಘವೇಂದ್ರ ಬಿಲ್ಲವ, ಗುಲಾಬಿ, ಸೂರ್ಯಕಾಂತಿ ಡಿ, ಗಣೇಶ ಗಾಣಿಗ, ಅಣ್ಣಪ್ಪ ಶೆಟ್ಟಿ, ದೇವದಾಸ್ ವಿ.ಜೆ., ಬಾಬು ದೇವಾಡಿಗ, ರಾಮಚಂದ್ರ ಖಾರ್ವಿ, ಮುಕ್ರಿ ಮೊಹಮ್ಮದ್ ಅಲ್ತಾಫ್, ಮೆಸ್ಕಾಂ, ಕೆಎಸ್‌ಆರ್‌ಟಿಸಿ, ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ ಹಾಗೂ ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.