ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭದ್ರಾವತಿಯ ಆಭಯಾರಣ್ಯದಿಂದ 15 ದಿನಗಳ ಹಿಂದೆ ದಾರಿ ತಪ್ಪಿ ನಾಡಿಗೆ ಬಂದ ಕಾಡಾನೆಯೊಂದು ಮಂಗಳವಾರ ರಾತ್ರಿ ಬಾಳೆಬರೆ ಘಾಟಿಯ ಮೂಲಕ ಸಿದ್ದಾಪುರಕ್ಕೆ ಬಂದಿದೆ. ಬುಧವಾರ ಬೆಳಗಿನ ಜಾವ ಮತ್ತು ರಾತ್ರಿಯ ವೇಳೆ ಸಿದ್ದಾಪುರ ಪೇಟೆ ಹಾಗೂ ಪರಿಸರದಲ್ಲಿ ಸಂಚರಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಈ ಕಾಡಾನೆ ಬಾಳೆಬರೆ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ ಹೊಸಂಗಡಿ ಗ್ರಾಮಕ್ಕೆ ಪ್ರವೇಶಿಸಿ ಕೆರೆಬೈಲು, ಕೆಪಿಸಿ ಕಾಲನಿ, ಭದ್ರಾಪುರದ ಮೂಲಕ ಹೊಸಂಗಡಿ ಪೇಟೆಗೆ ಬಂದಿದೆ. ಹೆದ್ದಾರಿಯಲ್ಲಿ ಮುಂದೆ ಸಾಗಿ, ಬೆಳಗಿನ ಜಾವ 6 ಗಂಟೆ ವೇಳೆಗೆ ಸಿದ್ದಾಪುರ ಪೇಟೆಗೆ ಬಂದಿತ್ತು. ಅಲ್ಲಿಂದ ಗ್ರಾಮೀಣ ಭಾಗಕ್ಕೆ ತೆರಳಿದೆ. ಈ ವೇಳೆ ಅರಣ್ಯ ಇಲಾಖೆ ಸಿಬಂದಿ ಮತ್ತು ಪೊಲೀಸರು ಪಟಾಕಿ ಸಿಡಿಸಿ ಅದನ್ನು ಹಿಂದಕ್ಕೆ ಕಳುಹಿಸುವ ಪ್ರಯತ್ನ ನಡೆಸಿದರು. ಆರಂಭದಲ್ಲಿ ಇದಕ್ಕೆ ಅಂಜದ ಆನೆ ಬಳಿಕ ಹಿಂದೆ ಸರಿದು ಪ್ರೌಢಶಾಲೆಯ ಹಿಂಬದಿಯ ತೋಟಕ್ಕೆ ನುಗ್ಗಿ ಕಾಡಿಗೆ ತೆರಳಿತು.
ಹಗಲು ವಿಶ್ರಾಂತಿ-ರಾತ್ರಿ ಸಂಚಾರ!
ಬುಧವಾರ ಹಗಲಿಡೀ ಕಾಡಿನಲ್ಲಿ ವಿಶ್ರಾಂತಿ ಪಡೆದಿದ್ದ ಕಾಡಾನೆ ಕತ್ತಲಾಗುತ್ತಿದ್ದಂತೆ ಮತ್ತೆ ಸಂಚಾರ ಆರಂಭಿಸಿದೆ. ಸಂಜೆಯ ವೇಳೆ ಕಾಡಿನಿಂದ ಹೊರ ಬಂದ ಆನೆ ಮತ್ತೆ ಸಿದ್ದಾಪುರ ಪೇಟೆಯತ್ತ ಸಾಗಲಾರಂಭಿಸಿತು. ಇದನ್ನು ತಿಳಿದ ಅರಣ್ಯಾಧಿಕಾರಿಗಳು ಮತ್ತೆ ಕಾರ್ಯಾಚರಣೆ ಆರಂಭಿಸಿದರು. ಜನರನ್ನು ಎಚ್ಚರಿಸಿದ್ದಲ್ಲದೆ ಸಿದ್ದಾಪುರ-ಹೊಸಂಗಡಿ ರಸ್ತೆಯ ವಾಹನ ಸಂಚಾರವನ್ನು ಸಣ್ಣಹೊಳೆ ಚೆಕ್ಪೋಸ್ಟ್ನಲ್ಲಿ ತಡೆಹಿಡಿದರು. ಅಂಗಡಿ ಮುಂಗಟ್ಟುಗಳನ್ನು ಕೂಡ ಮುಚ್ಚಿಸಿದರು. ರಾತ್ರಿ ವೇಳೆ ಸ್ಮಶಾನ ಪರಿಸರದಲ್ಲಿ ಆನೆ ಠಿಕಾಣಿ ಹೂಡಿದೆ.
ಶಾಲಾ ಕಾಲೇಜುಗಳಿಗೆ ರಜೆ:
ಒಂಟಿ ಸಲಗ ಸಂಚರಿಸಿದ ಪ್ರದೇಶಗಳಾದ ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಕಮಲಶಿಲೆ ಪರಿಸರದ ಶಾಲೆ,ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ಮುಂಜಾಗ್ರತ ಕ್ರಮವಾಗಿ ಕುಂದಾಪುರ ತಾಲೂಕು ದಂಡಾಧಿಕಾರಿಗಳು ಬುಧವಾರ ರಜೆ ಘೋಷಿಸಿದರು. ಮಾತ್ರವಲ್ಲದೆ ಬುಧವಾರದ ವಾರದ ಸಂತೆಯನ್ನು ಸುರಕ್ಷತೆಯ ದೃಷ್ಠಿಯಿಂದ ಸಿದ್ದಾಪುರ ಗ್ರಾ.ಪಂ. ರದ್ದುಗೊಳಿಸಿದೆ.
ಪಟಾಕಿಗೆ ಅಂಜುತ್ತಿಲ್ಲ:
ಅರಣ್ಯ ಇಲಾಖೆಯವರು ಆನೆ ಜನವಸತಿ ಪ್ರದೇಶಕ್ಕೆ ಬಾರದಂತೆ ಪಟಾಕಿ ಸಿಡಿಸಿದರೂ ಅದಕ್ಕೆ ಅದು ಅಂಜುತ್ತಿಲ್ಲ. ಮತ್ತೆ ಮತ್ತೆ ರಸ್ತೆಯಲ್ಲಿ ಸಾಗುತ್ತಿರುವುದು ಕಂಡು ಬಂತು. ಇದರಿಂದ ಅರಣ್ಯ ಇಲಾಖೆ ಸಿಬಂದಿಯೇ ಹಿಂದಕ್ಕೆ ಸರಿಯಬೇಕಾಯಿತು.
ರೇಡಿಯೊ ಕಾಲರ್ನಿಂದ ಮಾಹಿತಿ:
ಆನೆಯ ಕತ್ತಿಗೆ ಅಳವಡಿಸಿರುವ ರೇಡಿಯೋ ಕಾಲರ್ ಐಡಿಯ ಮೂಲಕ ಆನೆಯ ಚಲನವಲನದ ಬಗ್ಗೆ ಅರಣ್ಯ ಇಲಾಖೆ ನಿಗಾ ಇಟ್ಟಿದೆ. ಆನೆ ಎಲ್ಲಿದೆ ಮತ್ತು ಅದು ಯಾವ ಕಡೆ ಹೋಗುತ್ತಿದೆ ಎಂಬುದನ್ನು ಅರಿತು ಮೊದಲೇ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಜತೆಯಲ್ಲಿ ಡ್ರೋನ್ ಮೂಲಕ ಆನೆ ಇರುವ ಪ್ರದೇಶವನ್ನು ಗುರುತಿಸಿ, ಮರಳಿ ಕಾಡಿನ ಕಡೆ ಕಳುಹಿಸುವ ಪ್ರಯತ್ನ ಕೂಡ ಮಾಡಲಾಗುತ್ತಿದೆ.
ಮೈಕ್ ಮೂಲಕ ಎಚ್ಚರಿಕೆ:
ಅರಣ್ಯ ಇಲಾಖೆ ಆಟೋದಲ್ಲಿ ಮೈಕ್ ಕಟ್ಟಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಆನೆಯ ಸಂಚಾರವನ್ನು ಗಮನಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಕಾಡಾನೆಯನ್ನು ಕಾಡಿಗೆ ಕಳುಹಿಸುವ ಪ್ರಯತ್ನದಲ್ಲಿ ಕಳೆದ 15 ದಿನಗಳಿಂದ ಚಿಕ್ಕಮಗಳೂರು ಎಲಿಫೆಂಟ್ ಟಾಸ್ಕ್ ಪೋರ್ಸ್ (ಇಟಿಎಫ್)ನ 4 ತಂಡಗಳು ಕಾರ್ಯಾಚರಣೆ ಮಾಡುತ್ತಿವೆ. ಸಿದ್ದಾಪುರ ಪರಿಸರದಲ್ಲಿ 10 ಮಂದಿ ಇರುವ ಒಂದು ಇಟಿಎಫ್ ತಂಡ ಕಾರ್ಯಾಚರಣೆ ಮಾಡುತ್ತಿದೆ. ಇವರ ಜತೆ ಸಿದ್ದಾಪುರ, ಅಮಾಸೆಬೈಲು, ನಗರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು, ಶಂಕರನಾರಾಯಣ ವಲಯಾ ರಣ್ಯಾಧಿಕಾರಿಗಳ ತಂಡ ಭಾಗವಹಿಸಿವೆ.
ಆನೆಯನ್ನು ಕಂಡ ಕೂಡಲೇ ಫೋಟೋ ತೆಗೆಯುವುದು, ಬೆದರಿಸುವುದು, ಶಬ್ದ ಮಾಡುವ ಕೆಲಸ ಮಾಡಬಾರದು. ಹೀಗೆ ಮಾಡಿದಲ್ಲಿ ಅದು ಇನ್ನಷ್ಟು ಕೋಪಗೊಂಡು ದಾಳಿ ಮಾಡುವ ಸಾಧ್ಯತೆ ಇದೆ. ಕಾಡಾನೆ ಕಂಡು ಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಎಂದು ಇಲಾಖೆ ತಿಳಿಸಿದೆ.















