ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಶಿಕ್ಷಕ ವೃಂದದವರಿಗೆ ಶಿಕ್ಷಕರು ಬಳಸಬೇಕಾದ ವಿವಿಧ ಕೌಶಲ್ಯಗಳ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಾಗಾರದಲ್ಲಿ ಅಂಕುರಮ್ ಎಜುಕೇಶಲ್ ಟ್ರಸ್ಟ್ನ ಶೈಕ್ಷಣಿಕ ತಂತ್ರಜ್ಞರಾದ ಅಕ್ಷಯ ಕೆ. ಪಣಿಕರ್ ಅವರು ಮಾತನಾಡಿ, ಮಕ್ಕಳ ಮನಸ್ಸನ್ನು ಅರಿಯದೇ ಪಾಠದಲ್ಲಿ ತೊಡಗಿದರೆ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗದು. ಆದ್ದರಿಂದ ಮಕ್ಕಳ ಮನಸ್ಸನ್ನು ನಮ್ಮೆಡೆಗೆ ಸೆಳೆದು ಪಾಠದಲ್ಲಿ ತೊಡಗಲು ಅಧ್ಯಾಪಕರು ಸದಾ ಪ್ರಯತ್ನಿಸಬೇಕು ಎಂದು ನೆನಪಿಸುತ್ತಾ ಮಕ್ಕಳ ಸ್ಥಿತಿಗತಿಗಳನ್ನು ಗಮನಿಸಿ ಅವರ ಸಮಸ್ಯೆಯನ್ನು ಅರಿಯುವ ಮಾರ್ಗಗಳನ್ನು ಶಿಕ್ಷಕರಿಗೆ ಪರಿಚಯಿಸಿದರು. ದೋಷಪೂರಿತ ಸ್ಥಿತಿಯಲ್ಲಿರುವಾಗ ಮಕ್ಕಳನ್ನು ಹೇಗೆ ನಿಯಂತ್ರಿಸಬೇಕೆಂಬ ವಿಚಾರಗಳಲ್ಲಿ ಮಾಹಿತಿಯನ್ನು ಹಂಚಿಕೊಂಡರು.
ಬೇಸ್ ಸಂಸ್ಥೆಯು ನಿರ್ದೇಶಕರಾದ ರಾಮಪ್ರಸಾದ್ ಎಚ್. ಎಸ್. ಇಂಗ್ಲೀಷ್ ಭಾಷೆಯನ್ನು ತಪ್ಪಿಲ್ಲದೇ ಸಮರ್ಥವಾಗಿ ಬಳಸಿಕೊಂಡು ಮುಂದುವರಿಯಲು ಬೇಕಾದ ವೈಯಾಕರಣೀಯ ವಿಚಾರಗಳನ್ನು ತಿಳಿಸಿಕೊಟ್ಟರು. ಸುಮಾರು 60 ಜನ ಅಧ್ಯಾಪಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಉತ್ತಮ ಮಾರ್ಗದರ್ಶನವನ್ನು ಪಡೆದುಕೊಂಡರು.
ಈ ಸಮಯದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲೆಯ ಪ್ರಾಂಶುಪಾಲರೂ ಆದ ಶರಣ ಕುಮಾರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಳಿತು ಕೆಡುಕುಗಳಿರುತ್ತವೆ. ಅವುಗಳನ್ನು ಅರಿತು ಅವರ ಒಳಿತನ್ನು ಉತ್ತೇಜಿಸುವುದು, ದುರ್ಗುಣಗಳನ್ನು ನಿಯಂತ್ರಿಸುವುದು ಅಧ್ಯಾಪಕರ ಲಕ್ಷ್ಯವಾಗಬೇಕು. ಅದಕ್ಕೆ ಪೂರಕವಾಗಿ ಈ ಕಾರ್ಯಾಗಾರವನ್ನು ಆಯೋಜಿಸಿದ್ದು, ಅಕ್ಷಯ್ ಕೆ. ಪಣಿಕರ್ ಹಾಗೂ ರಾಮಪ್ರಸಾದರ ಮಾರ್ಗದರ್ಶನ ನಮ್ಮ ಅಧ್ಯಾಪಕರಿಗೆ ಸಹಾಯಕವಾಗಿದೆ. ಅವರ ಮಾರ್ಗದರ್ಶನದಂತೆ ಶಿಕ್ಷಕರು ಉತ್ತಮ ರೀತಿಯಲ್ಲಿ ಪಾಠಪ್ರವಚನಗಳನ್ನು ಮುಂದಿನ ತರಗತಿಗಳಲ್ಲಿ ನಡೆಸಬೇಕು ಎಂದು ತಿಳಿಸಿದರು.
ಅಂಕುರಮ್ ನ ಸದಸ್ಯರಾದ ರಂಜನ್ ಶ್ರೀರಾಮ, ಡಾ. ಶ್ರೀಪ್ರದಾ, ನೌಫ್ಹಲ್ ಅಹ್ಮದ್, ಭರತ್ ಮತ್ತು ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್., ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಹಾಗೂ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.















