ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಶಿಸಿ ಹೋಗುತ್ತಿರುವ ಸಾಂಪ್ರದಾಯಿಕ ಕುಲ ಕಸುಬುಗಳಿಗೆ ಕೇಂದ್ರ ಸರಕಾರ ಮರುಜೀವದ ಕಾಯಕಲ್ಪ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಜಿಲ್ಲಾಡಳಿತ ಉಡುಪಿ ಜಿಲ್ಲೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಉಡುಪಿ ಜಿಲ್ಲೆ, ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪಿ. ಎಂ. ವಿಶ್ವಕರ್ಮ ಯೋಜನೆಯ ಸೌಲಭ್ಯ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರಕಾರ ಈ ಯೋಜನೆಗಾಗಿ 12ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಿ ಜನಸಾಮಾನ್ಯರ ಕಣ್ತೆರೆಸುವ ಕಾರ್ಯವನ್ನು ಮಾಡಿದೆ. ಇದು ಗ್ರಾಮಮಟ್ಟದ ಶಕ್ತಿಯೋಜನೆಯಾಗಿ ಹೊರಹೊಮ್ಮಿದೆ. ಕೇಂದ್ರ ಸರಕಾರದ ಪ್ರತಿಯೊಂದು ಯೋಜನೆಗಳನ್ನು ಪಕ್ಷಭೇದ ಮರೆತು ತಲುಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ಕಾರ್ಯ ಶ್ಲಾಘನೀಯವಾದದ್ದು ಎಂದರು.
ಕುಂದಾಪುರ ವಿಧಾನಸಭಾ ಶಾಸಕ ಕಿರಣ್ ಕುಮಾರ್ ಕೊಡ್ಗಿ ಪಿ.ಎಂ ಯೋಜನೆಯ ಕಿಟ್ ವಿತರಿಸಿ ವಿಕಸಿತ ಭಾರತಕ್ಕೆ ಪಿ.ಎಂ ಯೋಜನೆ ಸಹಕಾರಿ ಮುಂದಿನ 2040ರೊಳಗೆ ಭಾರತ ನವ ಭಾರತವಾಗಿ ಮೂಡಿ ಬರಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕಿಟ್ ವಿತರಿಸಲಾಯಿತು. ಫಲಾನುಭವಿಗಳ ಪಟ್ಟಿಯನ್ನು ಸಂಸದ ಆಪ್ತ ಸಹಾಯಕರಾದ ಹರೀಶ್ ಶೆಟ್ಟಿ ವಾಚಿಸಿದರು.
ಈ ಸಂದರ್ಭದಲ್ಲಿ ಸಾಲಿಗ್ರಾಮ ಅಂಚೆ ಇಲಾಖಾಧಿಕಾರಿ ಶಂಕರ ಲಂಬಾಣಿ, ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಸೂಯ ಹೇರ್ಳೆ ಉಪಸ್ಥಿತರಿದ್ದರು.
ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಸ್ವಾಗತಿಸಿ, ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಪಟ್ಟಣಪಂಚಾಯತ್ ಸಿಬ್ಬಂದಿ ಸುಮಿತ್ರ ನಿರೂಪಿಸಿ, ವಂದಿಸಿದರು.















