ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಭಯ ತಿಟ್ಟುಗಳ ಮೇರು ಕಲಾವಿದ, ಕಟೀಲು ಮೇಳದಲ್ಲಿ 2 ದಶಕಕ್ಕೂ ಹೆಚ್ಚು ಕಾಲ ತಿರುಗಾಟ ನಡೆಸಿದ್ದ ಕೋಡಿ ಕುಷ್ಟ ಗಾಣಿಗ (78) ಅಲ್ಪಕಾಲ ದ ಅಸೌಖ್ಯದಿಂದ ಜೂ.12ರ ಗುರುವಾರ ಮಧ್ಯಾಹ್ನ ನಿಧನರಾದರು.
ಕಟೀಲು ಕ್ಷೇತ್ರ ಮಹಾತ್ಮಿಯ ನಂದಿನಿ ಪಾತ್ರದ ಮೂಲಕ ಜನ ಮನ್ನಣೆ ಪಡೆದ ಇವರು ಶ್ರೀ ದೇವಿ ಮಹಾತ್ಮೆಯ ದೇವಿ ಪಾತ್ರ ಇಂದಿಗೂ ಯಕ್ಷಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ. ದೇವಿ, ನಂದಿನಿ, ಸುಭದ್ರೆ, ಮಂಡೋದರಿ, ದ್ರೌಪದಿ, ಕಯಾದು, ಸೀತೆ, ಅಂಬೆ, ದಮಯಂತಿ, ಮಾಯಾ ಪೂತನಿ, ಮಾಯಾ ಶೂರ್ಪನಖಿ, ಚಂದ್ರಮತಿ ಹೀಗೆ ಸ್ತ್ರೀ ಪಾತ್ರದ ನವರಸಗಳಲ್ಲಿಯೂ ನಿಸ್ಸೀಮರಾಗಿದ್ದರು. ಪುರುಷ ವೇಷಗಳಾದ ಪರಶುರಾಮ, ವಿಷ್ಣು, ಕೃಷ್ಣ ಪಾತ್ರಗಳನ್ನು ಮಾಡುತ್ತಿದ್ದರು.
ಅವರು ಅಮೃತೇಶ್ವರಿ, ಮಾರಣಕಟ್ಟೆ, ಕಲಾವಿಹಾರ ಮೇಳ, ರಾಜರಾಜೇಶ್ವರೀ ಮೇಳ ಹಾಗೂ ಸುದೀರ್ಘವಾಗಿ ಕಟೀಲು ಮೇಳದಲ್ಲಿ ಒಟ್ಟು ಸುಮಾರು ಮೂರುವರೆ ದಶಕಗಳ ಕಾಲ ತಿರುಗಾಟ ಮಾಡಿದ್ದಾರೆ. ಉಡುಪಿ ಕಲಾರಂಗ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಯಕ್ಷಧ್ರುವ ಪಟ್ಲ ಪ್ರತಿಷ್ಠಾನ ಪ್ರಶಸ್ತಿ,ಡಾ.ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಇವರಿಗೆ ಸಂದಿದೆ.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಜೂ.13ರ ಬೆಳಿಗ್ಗೆ 8.30ರ ಹೊತ್ತಿಗೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.















