ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರದ ಅಂಕದಕಟ್ಟೆಯಲ್ಲಿ ತಡರಾತ್ರಿ ಚಿರತೆ ಓಡಾಟ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಅಂಕದಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಇಲ್ಲಿನ ನಿವಾಸಿ ಡಾ| ಜಾನ್ಸನ್ ಅವರ ಮನೆ ಹಿಂಭಾಗದಲ್ಲಿ ಬುಧವಾರ ರಾತ್ರಿ 12.56ರ ವೇಳೆಗೆ ಚಿರತೆ ನಡೆದಾಡಿದೆ. ಚಿರತೆ ಓಡಾಟದ ದೃಶ್ಯ ಸ್ಥಳೀಯ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಲೈವ್ ಮಾನಿಟರಿಂಗ್ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗುತ್ತಿತ್ತು. ಇದನ್ನು ಗಮನಿಸಿದ ಸಂಸ್ಥೆಯ ಸಿಬಂದಿ ತತ್‌ಕ್ಷಣ ಮನೆಯವರಿಗೆ ಮನೆಯಿಂದ ಹೊರಗೆ ಬರದಂತೆ ಸೂಚಿಸಿದರು. ಬಳಿಕ ಚಿರತೆ ಮರೆಯಾಗಿದೆ. ಎಲ್ಲಿ ಹೋಗಿದೆ ಎನ್ನುವುದು ಗೊತ್ತಾಗಿಲ್ಲ.
ಈವರೆಗೆ ಕುಂದಾಪುರದ ಗ್ರಾಮಾಂತರ ಭಾಗಗಳಾದ ತೆಕ್ಕಟ್ಟೆ, ಮೊಳಹಳ್ಳಿ, ಬಡಾಕೆರೆ, ಕೋಟೇಶ್ವರದ ಮಾರ್ಕೋಡು, ಹೊಂಬಾಡಿ ಮಂಡಾಡಿ, ಕಾಳಾವರ, ಹಾರ್ದಳ್ಳಿ ಮಂಡಳ್ಳಿ, ಅಮಾಸೆಬೈಲು, ಕೊರ್ಗಿ, ಜಪ್ತಿ, ಕೊಡ್ಲಾಡಿ, ಆಲೂರು, ಕನ್ನಡಕುದ್ರು ಮೊದಲಾದೆಡೆ ಚಿರತೆ ಕಾಣಿಸಿಕೊಂಡಿತ್ತು. ಎರಡು ಮೂರು ವರ್ಷಗಳಿಂದ ಚಿರತೆ ಓಡಾಟ ಸುದ್ದಿ ಹೆಚ್ಚಾಗುತ್ತಿದ್ದು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 8 ಚಿರತೆಗಳು ಬೋನಿಗೆ ಬಿದ್ದಿವೆ.
4 ಚಿರತೆಗಳು ಉರುಳಿಗೆ ಬಿದ್ದಿದ್ದವು. 3 ಚಿರತೆಗಳು ಬಾವಿಗೆ ಬಿದ್ದಿದ್ದವು. ಇವೆಲ್ಲವನ್ನೂ ಅರಣ್ಯ ಇಲಾಖೆ ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿವೆ.ಇವುಗಳ ಪೈಕಿ ಅಪರೂಪದ ಕಪ್ಪು ಚಿರತೆಯೂ ಇತ್ತು. ಕಳೆದ 5 ವರ್ಷಗಳಲ್ಲಿ ಅರಣ್ಯ ಇಲಾಖೆ ಸೆರೆ ಹಿಡಿದ ಚಿರತೆಗಳ ಸಂಖ್ಯೆ 15 ದಾಟಿವೆ.










