ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಬೈಂದೂರು ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ನದಿಗಳು ಉಕ್ಕಿ ಹರಿದು ಸೋಮವಾರ ಹಲವೆಡೆ ನೆರೆ ಕಾಣಿಸಿಕೊಂಡಿದೆ.





ಪರಿಣಾಮ ಕುಂದಾಪುರ ತಾಲೂಕಿನ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿ ನೀರು ಹಾಗೂ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸುತ್ತ ಬ್ರಹ್ಮಕುಂಡ ನದಿ ನೀರು ಉಕ್ಕಿ ಹರಿದು ಸುತ್ತುವರಿದಿದೆ. ನದಿ ಪಾತ್ರದ ಊರುಗಳು, ತಗ್ಗು ಪ್ರದೇಶಗಳು ನೀರಿನಿಂದ ಆವೃತಗೊಂಡಿದೆ.



ಪಶ್ಚಿಮ ಘಟ್ಟ ಪ್ರದೇಶದಲ್ಲಿ ರಾತ್ರಿಯಿಡೀ ಭಾರೀ ಮಳೆಯಿಂದಾಗಿ ಸೌಪರ್ಣಿಕಾ ನದಿ ಪಾತ್ರದ ನಾವುಂದ ಗ್ರಾಮದ ಸಾಲ್ಬುಡ, ಅರೆಹೊಳೆ, ನಾಡ ಗ್ರಾಮದ ಚಿಕ್ಕಳ್ಳಿ, ಪಡುಕೋಣೆ ಸೇರಿದಂತೆ ಹಲವು ಭಾಗಗಳಲ್ಲಿ ನೆರೆ ಬಂದಿದ್ದು ಪರಿಣಾಮ ಮರವಂತೆ – ಪಡುಕೋಣೆ ರಸ್ತೆ ಜಲಾವೃತಗೊಂಡಿದೆ. ಹೆರಂಜಾಲು, ಶಿರೂರು ಗ್ರಾಮಗಳಲ್ಲಿಯೂ ನೆರೆ ಕಾಣಿಸಿಕೊಂಡಿದೆ. ಎಡಮಾವಿನ ಹೊಳೆ ಪಾತ್ರದ ಹೆರಂಜಾಲು, ಹಳಗೇರಿಯಲ್ಲಿ ಕೃಷಿ ಭೂಮಿಗಳು ಜಲಾವೃತಗೊಂಡಿದೆ. ಸುಮನಾವತಿ ನದಿ ಪಾತ್ರದ ಬಿಜೂರು, ಯಡ್ತರೆ, ತಗ್ಗರ್ಸೆಯ ಹಲವೆಡೆ ಜಲಾವೃತಗೊಂಡು ಮನೆಗಳಿಗೂ ನೆರೆ ನೀರು ನುಗ್ಗಿದೆ. ಮಯ್ಯಾಡಿಯಲ್ಲಿರುವ ನ್ಯಾಯಾಲಯದ ಸಂಕೀರ್ಣವೂ ಜಲಾವೃತಗೊಂಡಿದೆ. ಎಳಜಿತದ ಭಾಗದಲ್ಲಿಯೂ ನದಿಗಳು ಉಕ್ಕಿ ಹರಿದು ನೆರೆ ಭೀತಿ ಉಂಟಾಗಿದೆ. ತಗ್ಗರ್ಸೆ – ಮಯ್ಯಾಡಿ ಭಾಗದಲ್ಲಿ ರಸ್ತೆ ಮೇಲೆಯೇ ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.










