ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‌ನಿಂದ ಜೂನ್ 19 ರಂದು ಕುಂದಾಪುರ ಹಾಗೂ ಬೈಂದೂರಿನ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕುಂದಾಪುರದ ಸರಕಾರಿ ಪ. ಪೂ. ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಕಾನ್ಪಿಡೆಂಟ್ ಡೆಂಟಲ್ ಇಕ್ವಿಪ್‌ಮೆಂಟ್ ಪ್ರೈ. ಲಿ.ನ ಆಡಳಿತ ನಿರ್ದೇಶಕರಾದ ಡಾ| ಸುಭಾಶ್ಚಂದ್ರ ಶೆಟ್ಟಿ ಸಮಾರಂಭ ಉದ್ಘಾಟಿಸಲಿದ್ದಾರೆ.

ಎರಡು ದಶಕಗಳಿಂದ ಹಲವು ಸಮಾಜಾಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸಿರುವ ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್ ಅರ್ಹ ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ, ಅನಾರೋಗ್ಯ ಪೀಡಿತರಿಗೆ, ಅಸಹಾಯಕರಿಗೆ, ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡುತ್ತಾ ಬಂದಿದ್ದು, ಈ ಸೇವಾ ಕಾರ್ಯಗಳು ನಿರಂತರ ಮುಂದುವರಿಯಲಿವೆ ಎಂದು ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ತಿಳಿಸಿದ್ದಾರೆ.
ದಿ. ಗಿಳಿಯಾರು ಕುಶಲ ಹೆಗ್ಡೆಯವರು ನಮ್ಮನ್ನಗಲಿ 25 ವರ್ಷಗಳಾಗುತ್ತಿದ್ದು, ಅವರ ಸ್ಮರಣಿಕೆಯಲ್ಲಿ ಸಮುದಾಯ ಸಭಾ ಭವನಗಳನ್ನೂ ನಿರ್ಮಾಣ ಮಾಡುವಲ್ಲಿ ಸಹಕಾರ ನೀಡಿದ್ದೇವೆ. ’ಕೊರೋನಾ’ ಸಂಕಟದ ಸಂದರ್ಭದಲ್ಲಿ ತಾಲೂಕು ಕಚೇರಿ, ಆರೋಗ್ಯ ಇಲಾಖೆಯೊಂದಿಗೆ ಮಹತ್ವದ ಸಹಕಾರ ನೀಡಿದ್ದು, ಇಂತಹ ಸೇವಾ ಕಾರ್ಯಗಳು ಗಿಳಿಯಾರು ಕುಶಲ ಹೆಗ್ಡೆಯವರ ಸ್ಮರಣೆಯಲ್ಲಿ ಮುಂದುವರೆಯುತ್ತದೆ ಎಂದು ವಿಶ್ವಸ್ಥರಾದ ಉದಯ ಹೆಗ್ಡೆ ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ ಕುಂದಾಪುರ ರೆಡ್ ಕ್ರಾಸ್ ಘಟಕ, ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ, ಯಶಸ್ವೀ ಕಲಾ ವೃಂದ ಕೊಮೆ, ತೆಕ್ಕಟ್ಟೆ., ಸಂಘಟನೆಗಳ ಸಾಧನೆಗಳನ್ನು ಪರಿಗಣಿಸಿ ಗೌರವಿಸಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಶ್ರೇಷ್ಠ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಲಾಗುತ್ತದೆ.
ಜೂನ್ 19 ರಂದು ಕುಂದಾಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ, ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ ಗಿಳಿಯಾರು ಕುಶಲ ಹೆಗ್ಡೆ ದತ್ತಿ ಸಂಸ್ಥೆಯ ಸರ್ವ ವಿಶ್ವಸ್ಥರು ಆಹ್ವಾನಿಸಿದ್ದಾರೆ.















