ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ 2025-26ನೇ ವರ್ಷದಲ್ಲಿ ದಾಖಲಾತಿ ಪಡೆದುಕೊಂಡು ಅಧ್ಯಯನಕ್ಕೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಶಿಕ್ಷಕ-ಸಹಪಾಠಿಗಳೊಂದಿಗೆ ಹಂಚಿಕೊಳ್ಳಲು ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ನಡೆಸಲಾಯಿತು.
ಜೂ.16 ರಂದು ವಸತಿನಿಲಯದ ವಿದ್ಯಾರ್ಥಿಗಳ ಹಾಗೂ ಜೂ.18 ರಂದು ಉಳಿದ ವಿದ್ಯಾರ್ಥಿಗಳ ಪ್ರತಿಭಾಪ್ರದರ್ಶನ ನಡೆಸಲಾಯಿತು.
ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಲ್ಲಿರುವ ಪ್ರತಿಭೆಯನ್ನು ಅರಿತು ಅವರೊಂದಿಗೆ ಬೆರೆಯಲು ಇದು ಸಹಕಾರಿ. ವೇದಿಕೆಯ ಅಥವಾ ಶಾಲೆಯ ಭಯದಿಂದ ಮಗು ದೂರವಿದ್ದು, ತನ್ನ ಪ್ರತಿಭೆಯನ್ನು ಅನಾವರಣಗೊಳಿಸದಿದ್ದರೆ ಆ ಪ್ರತಿಭೆ ಸುಪ್ತವಾಗುವುದು. ಮಕ್ಕಳನ್ನು ಲವಲವಿಕೆಯಿಂದ ಕೂಡುವಂತೆ ಮಾಡಲು ಈ ಕಾರ್ಯಕ್ರಮ ಬಹಳ ಸಹಕಾರಿಯಾಗಿದೆ.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಗೀತ, ನೃತ್ಯ, ಶ್ಲೋಕಪಠಣ, ಕರಾಟೆ, ಯೋಗ, ಭಜನೆ, ಏಕಪಾತ್ರಾಭಿನಯ, ಪಿಯೋನವಾದನ, ಸಮೂಹಗಾಯನ, ಕಿರುನಾಟಕ, ಸಮೂಹನೃತ್ಯವೇ ಮೊದಲಾದ ತಮ್ಮ ಆಸಕ್ತಿಯ ಹವ್ಯಾಸಿ ಚಟುವಟಿಕೆಗಳ ಪ್ರದರ್ಶನವನ್ನು ನಡೆಸಿದರು.
8ನೇ ತರಗತಿಯ ಗಿರೀಶ, ಪೂರ್ವೀ, ಶುಭಾಂಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಕಾರ್ಯಕ್ರಮವನ್ನು ಆಮೂಲಾಗ್ರವಾಗಿ ಗಮನಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಪ್ರೋತ್ಸಾಹಿಸಿದರು.
ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಶಾಲಾ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರೂ ಉಪಸ್ಥಿತರಿದ್ದರು.















