ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಫಲಾನುಭವಿಗಳ ಮಾಹಿತಿಯನ್ನು ಸರ್ಕಾರ ಪಡೆಯುತ್ತಿರುವುದು ಈ ಯೋಜನೆಯನ್ನು ನಿಲ್ಲಿಸುವ ಉದ್ದೇಶದಿಂದಲ್ಲ. ಆದರೆ ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಸಾಮಾಜಿಕ ಪಿಂಚಣಿ ನಿಲ್ಲಿಸುವ ಹುನ್ನಾರ ಮಾಡುತ್ತಿದೆ ಎಂದು ಅಪಪ್ರಚಾರ ಮಾಡುವುದರ ಮೂಲಕ ಜನರ ದಾರಿ ತಪ್ಪುಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದರು.
ಈಗ ಪ್ರಸ್ತುತ 60 ರಿಂದ 63 ವರ್ಷ ಪ್ರಾಯದವರಿಗೆ 600 ರೂಪಾಯಿ ಪಿಂಚಣಿ, 63 ರಿಂದ 65 ವರ್ಷ ಪ್ರಾಯದವರಿಗೆ 800 ಹಾಗೂ 65 ವರ್ಷ ಪ್ರಾಯ ಮೇಲ್ಪಟ್ಟವರಿಗೆ 1200 ರೂಪಾಯಿ ಪಿಂಚಣಿ ದೊರಕುತ್ತಿದೆ.
ಆದರೆ ಪ್ರಾಯ ಹಾಗೂ ಇತರೆ ದಾಖಲೆಗಳಲ್ಲಿನ ಗೊಂದಲಗಳಿಂದ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಸಿಕ ಪಿಂಚಣಿಯಲ್ಲಿ ಒಂದಷ್ಟು ಗೊಂದಲಗಳು ಏರ್ಪಟ್ಟ ಕಾರಣ ಅಂದರೆ 600 ರೂಪಾಯಿ ಪಿಂಚಣಿ ಪಡೆಯುವವರಿಗೆ 1200 ರೂಪಾಯಿ ಪಿಂಚಣಿ ಅವರ ಖಾತೆಗೆ ಹೋಗುತ್ತಿದ್ದು, 1200 ಪಿಂಚಣಿ ಪಡೆಯುತ್ತಿದ್ದ ಫಲಾನುಭವಿಗಳ ಖಾತೆಗೆ 600 ರೂಪಾಯಿ ಬರುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದ ಕಾರಣ ಇದನ್ನು ಸರಿಪಡಿಸಲು ಪಿಂಚಣಿ ಪಡೆಯುವ ಫಲಾನುಭವಿಗಳಿಂದ ಆಧಾರ್ ಕಾರ್ಡ್ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಪಡೆಯಲಾಗುತ್ತಿದೆ ಬಿಟ್ಟರೆ ಬೇರೆ ಯಾವುದೇ ದುರುದ್ದೇಶದಿಂದಲ್ಲ.
ಪಂಚ ಗ್ಯಾರಂಟಿಗಳನ್ನು ನಿರಂತರ ಟೀಕಿಸುತ್ತಾ ಬರುತ್ತಿರುವ ಬಿಜೆಪಿ ಸಾಮಾಜಿಕ ಪಿಂಚಣಿ ವ್ಯವಸ್ಥೆ ಕೂಡ ನಿಲ್ಲಬೇಕು ಎನ್ನುವ ಹುನ್ನಾರ ನಡೆಸುತ್ತಿದೆ. ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಪರವಾದ, ನುಡಿದಂತೆ ನಡೆಯುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರ ಸಾಧನೆಗೆ ಕಂಗೆಟ್ಟ ಬಿಜೆಪಿ ನಿರಂತರ ಅಪಪ್ರಚಾರದಲ್ಲಿ ತೊಡಗಿಕೊಳ್ಳುವುದನ್ನು ಬಿಟ್ಟು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡಲಿ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.










