ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಸ್‌ಗಳು, ಆಟೋ ರಿಕ್ಷಾ ಮತ್ತು ಇತರ ವಾಹನಗಳು ಸೇರಿದಂತೆ ಮಕ್ಕಳನ್ನು ಶಾಲೆಗೆ ಸಾಗಿಸುವ ಎಲ್ಲ ವಾಹನಗಳನ್ನು ಪರಿಶೀಲಿಸಲು ಇಡೀ ಜಿಲ್ಲೆಯಲ್ಲಿ ಗುರುವಾರ ನಡೆದ ವಿಶೇಷ ಕಾರ್ಯಾಚರಣೆ ಅಂಗವಾಗಿ ಕುಂದಾಪುರ, ಬೈಂದೂರು, ಹೆಬ್ರಿ ಪ್ರದೇಶಗಳಲ್ಲಿ ತಪಾಸಣೆ ನಡೆಯಿತು.
ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದಂತೆ, ಬೈಂದೂರು ಠಾಣೆಯಲ್ಲಿ 45 ವಾಹನಗಳ ತಪಾಸಣೆ ನಡೆಸಿ 3 ಕೇಸು ದಾಖಲಿಸಿ 1,500 ರೂ. ದಂಡ ವಿಧಿಸಲಾಗಿದೆ. ಕೊಲ್ಲೂರು ಠಾಣೆಯಲ್ಲಿ 28 ವಾಹನಗಳ ತಪಾಸಣೆ ನಡೆಸಿ 3 ಕೇಸು ದಾಖಲಿಸಿ 2,000 ರೂ. ದಂಡ, ಗಂಗೊಳ್ಳಿ ಠಾಣೆಯಲ್ಲಿ 25 ವಾಹನಗಳ ತಪಾಸಣೆ ನಡೆಸಿ 3 ಕೇಸು ದಾಖಲಿಸಿ 1,200 ರೂ. ದಂಡ, ಕುಂದಾಪುರ ಠಾಣೆಯಲ್ಲಿ 23 ವಾಹನಗಳ ತಪಾಸಣೆ ನಡೆಸಿ 13 ಕೇಸು ದಾಖಲಿಸಿ 5,300 ರೂ. ದಂಡ, ಕುಂದಾಪುರ ಸಂಚಾರ ಠಾಣೆಯಲ್ಲಿ 62 ವಾಹನಗಳ ತಪಾಸಣೆ ನಡೆಸಿ 23 ಕೇಸು ದಾಖಲಿಸಿ 9,000 ರೂ. ದಂಡ, ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 70 ವಾಹನಗಳ ತಪಾಸಣೆ ನಡೆಸಿ 22 ಕೇಸು ದಾಖಲಿಸಿ 10,900 ರೂ. ದಂಡ, ಶಂಕರನಾರಾಯಣ ಠಾಣೆಯಲ್ಲಿ 37 ವಾಹನಗಳ ತಪಾಸಣೆ ನಡೆಸಿ 13 ಕೇಸು ದಾಖಲಿಸಿ 4,400 ರೂ. ದಂಡ, ಅಮಾಸೆಬೈಲ್ ಠಾಣೆಯಲ್ಲಿ 10 ವಾಹನಗಳ ತಪಾಸಣೆ ನಡೆಸಿ 2 ಕೇಸು ಹಾಕಿ 2,000 ರೂ. ದಂಡ ಹಾಕಲಾಗಿದೆ. ಒಟ್ಟು 300 ವಾಹನಗಳ ತಪಾಸಣೆ ನಡೆಸಿ 82 ಕೇಸು ಹಾಕಿ 36,000 ರೂ. ದಂಡ ವಿಧಿಸಲಾಗಿದೆ.
ಕುಡಿದು ವಾಹನ ಚಲಾಯಿಸುವುದು, ಫಿಟೈಸ್ ಪ್ರಮಾಣಪತ್ರದ ಕೊರತೆ, ಮಿತಿಗಿಂತ ಹೆಚ್ಚು ಮಕ್ಕಳನ್ನು ಸಾಗಿಸುವುದು ಸೇರಿದಂತೆ ಎಲ್ಲ ರೀತಿಯ ಉಲ್ಲಂಘನೆಗಳನ್ನು ಪರಿಶೀಲಿಸಲಾಯಿತು.
ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸಾದ್ ಮತ್ತು ತಂಡ ನಗರದಲ್ಲಿ ಕಾರ್ಯಾಚರಣೆ ನಡೆಸಿತು. ಕೆಲವು ಆಟೋರಿಕ್ಷಾಗಳಲ್ಲಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿರುವುದು ಕಂಡುಬಂತು. ಶಾಲಾ ಬಸ್‌ಗಳಲ್ಲೂ 75ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗುತ್ತಿತ್ತು.
2 ದಿನಗಳ ಹಿಂದೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಶಾಲಾ ವಾಹನಗಳು, ಆಟೋರಿಕ್ಷಾಗಳ ಚಾಲಕ ಮತ್ತು ಮಾಲಕರ ಜತೆ ಸಭೆ ನಡೆಸಲಾಗಿತ್ತು. ತಾಲೂಕಿನ ವಿವಿಧ ಖಾಸಗಿ ಶಾಲೆಗಳು ವಾಹನದಲ್ಲಿ ಮಿತಿಮೀರಿದ ವಿದ್ಯಾರ್ಥಿಗಳನ್ನು ತುಂಬಿಸುವುದರಿಂದ ಮತ್ತು ಅತಿಯಾದ ವೇಗ, ನಿಯಂತ್ರಣವಿಲ್ಲದ ಕಾಸಿಂಗ್, ಇವೆಲ್ಲವನ್ನು ಗಮನಿಸಿದ ಸಂಚಾರ ಠಾಣೆ ಪೊಲೀಸರು ಕ್ರಮ ಕೈಗೊಂಡರು.
ಬೈಂದೂರು ವೃತ್ತ ನೀರೀಕ್ಷಕ ಸವಿತ್ರತೇಜ್ ಅವರು ಶಾಲಾ ವಾಹನಗಳ ತಪಾಸಣೆ ನಡೆಸಿ ಅಪರಾಧ ಮರುಕಳಿಸಿದರೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಬಂದಿರುವುದ ಕಂಡು ಬಂದಲ್ಲಿ ಅಂತಹ ವಾಹನಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಶಾಲಾ ವಾಹನಗಳು ಸಂಚಾರಿ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ಎಸ್ಪಿ ಹರಿರಾಂ ಜೈಶಂಕರ್ ಆದೇಶ ಹೊರಡಿಸಿದ್ದರು.















