ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶ, ಕುಂದಾಪುರದ ಪತಂಜಲಿ ಯೋಗಧಾಮ, ಮತ್ತು ಲಯನ್ಸ್ ಕ್ಲಬ್ ಕ್ರೌನ್ ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ, ಯುಥ್ ರೆಡ್ ಕ್ರಾಸ್ ಘಟಕ, ರೇಂಜರ್ಸ್ ಮತ್ತು ರೋವರ್ಸ್ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಶನಿವಾರ ನಡೆಯಿತು.
ಅಂತಾರಾಷ್ಟ್ರೀಯ ಕರಾಟೆ ಪಟು ಕಿರಣ್ ಆಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಉತ್ತಮ ಆರೋಗ್ಯಕ್ಕಾಗಿ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರದ ಪತಂಜಲಿ ಆರೋಗ್ಯಧಾಮ, ಕಡ್ಗಿರಸ್ತೆ, ಕುಂದಾಪುರ ಇಲ್ಲಿನ ಯೋಗ ಪ್ರಕೃತಿ ಚಿಕಿತ್ಸಾ ತಜ್ಞರು ಡಾ. ಸಾತಪ್ಪ ಹೂವಿನಹಳ್ಳಿ ಮಾತನಾಡಿ, ಯೋಗವು ಇಂದಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿತ್ಯವೂ ಯೋಗಾಭ್ಯಾಸ ಮಾಡಿದಾಗ ನಿತ್ಯ ಜೀವನದಲ್ಲಿ ಉತ್ತಮ ಆರೋಗ್ಯವಂತ ದೇಹ, ಉಸಿರು ಮತ್ತು ಮನಸ್ಸು ನಿಮ್ಮದಾಗುತ್ತದೆ.
ಯೋಗ, ಪ್ರಾಣಾಯಾಮಗಳು ಬದುಕಿಗೆ ಹೊಸ ಚೈತನ್ಯ ತುಂಬಿಸಲು ನೆರವಾಗುತ್ತದೆ. ವಿದ್ಯಾರ್ಥಿ ಜೀವನ ಎಂಬ ಮಹತ್ವದ ಘಟ್ಟದಲ್ಲಿ ಯೋಗವೂ ನಿಮ್ಮಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸುವಲ್ಲಿ ನೆರವಾಗುತ್ತದೆ. ಅಲ್ಲದೆ ವಿಶ್ವದಾದ್ಯಂತ ಈ ನಮ್ಮ ಯೋಗ ವಿದ್ಯೆಯನ್ನು ಪರಿಶ್ರಮದಿಂದ ಕಲಿಯುತ್ತಾರೆ. ನಾವು ನಮ್ಮ ಅತ್ಯಮೂಲ್ಯ ಕೊಡುಗೆ ಯೋಗವನ್ನು ನಮ್ಮ ನಿತ್ಯ ಜೀವನದಲ್ಲಿ ಮಾಡುವುದದರ ಮೂಲಕ ಆರೋಗ್ಯವಂತರಾಗಿರೋಣ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರದ ಲಯನ್ಸ್ ಕ್ಲಬ್ ಕ್ರೌನ್ ಇದರ ಅಧ್ಯಕ್ಷ ದಿನಕರ ಶೆಟ್ಟಿ ಮಾತನಾಡಿ, ವೇಗವಾಗಿ ಓಡುತ್ತಿರುವ ಈ ಜಗತ್ತಿನಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಆರ್ಥಿಕವಾಗಿ ಬೆಳೆಯುತ್ತಿದ್ದೇವೆ. ಹಾಗೆ ಅನಾರೋಗ್ಯದ ಸಮಸ್ಯೆಗಳು ಹೆಚ್ಚುತ್ತಿವೆ. ಇದಕ್ಕೆ ಪರಿಹಾರವೆಂದರೆ ಯೋಗಾಭ್ಯಾಸ ಮಾತ್ರ. ಯೋಗವು ನಮ್ಮನ್ನು ನಾವು ಸುರಕ್ಷಿತ, ಸಕಾರಾತ್ಮಕ ಮತ್ತು ಆರೋಗ್ಯಕರವಾಗಿರಿಸಲು ನೆರವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಮಾತನಾಡಿ, ಭಾರತ ವಿಶ್ವಗುರುವಾಗುವಲ್ಲಿ ಪತಂಜಲಿ ಯೋಗದ ಕೊಡುಗೆ ಮತ್ತು ಪಾತ್ರ ಬಹಳವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ.ಗೊಂಡ, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಸತ್ಯನಾರಾಯಣ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜನಾಧಿಕಾರಿ ಅರುಣ್ ಎ.ಎಸ್., ಎನ್.ಸಿ.ಸಿ ಅಧಿಕಾರಿ ಅಂಜನ್ ಕುಮಾರ್ ಎ.ಎಲ್, ರೇಂಜರ್ಸ್ ಮತ್ತು ರೋವರ್ಸ್ ಘಟಕದ ಅಧಿಕಾರಿ ಅಕ್ಷತಾ, ಯುಥ್ ರೆಡ್ ಕ್ರಾಸ್ ಘಟಕದ ವಿದ್ಯಾರಾಣಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯೋಗ ಪಟು ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿನಿ ಮಹಿಮಾ ಅವರ ಯೋಗ ಸಾಧನೆಯನ್ನು ಗುರುತಿಸಿ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.
ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ರಾಮಚಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.















