ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಮಂಡಲ ಬಿಜೆಪಿ ವತಿಯಿಂದ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್‌ಗಳ ಮುಂಭಾಗದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು. ಕ್ಷೇತ್ರದ ಹಲವಾರು ಗ್ರಾಮ ಪಂಚಾಯತ್‌ಗಳ ಮುಂಭಾಗದಲ್ಲಿ ನಡೆದ ಈ ಧರಣಿ ಪ್ರತಿಭಟನೆಯಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಭಾಗಿಯಾದರು.
ಶಾಸಕರು ಪ್ರತಿಭಟನೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲದಾಗಿದೆ. ಜನಸಾಮಾನ್ಯರ ಸಂಕಷ್ಟಗಳು ಈ ಭ್ರಷ್ಟ ಸರ್ಕಾರಕ್ಕೆ ಕಾಣುತ್ತಿಲ್ಲ. ದ್ವೇಷದ ರಾಜಕಾರಣಕ್ಕೆ ಜನರು ಬಲಿಯಾಗುತ್ತಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದರೂ, ಕಾಂಗ್ರೆಸ್ ಅಭ್ಯರ್ಥಿಗೂ ಒಂದಷ್ಟು ಮತಗಳು ಬಿದ್ದಿವೆ. ಬಿಜೆಪಿ ಮೇಲಿನ ದ್ವೇಷದಿಂದ ಕ್ಷೇತ್ರದ ಮತದಾರರಿಗೆ ಈ ಸರ್ಕಾರ ಅನ್ಯಾಯ ಎಸಗುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಕಾರಣವಿಲ್ಲದೆ ಅಕ್ರಮ ಸಕ್ರಮ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದು, ಭೂ ಪರಿವರ್ತಿತ ಜಮೀನುಗಳಲ್ಲಿ ಏಕ ವಿನ್ಯಾಸ ನೀಡುವ ಸಮಸ್ಯೆ, ಸಾಮಾಜಿಕ ಪಿಂಚಣಿಗಳನ್ನು ರದ್ದುಗೊಳಿಸಿರುವುದು, ಬೆಲೆ ಏರಿಕೆ, ವಸತಿ ಯೋಜನೆಗಳಲ್ಲಿ ಅಕ್ರಮ ಸೇರಿದಂತೆ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ಶಾಸಕರು ಧ್ವನಿ ಎತ್ತಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೂರು, ಹಳ್ಳಿಹೊಳೆ, ಕೆರಾಡಿ, ಹೇರೂರು, ಉಳ್ಳೂರು 74, ಗುಜ್ಜಾಡಿ, ಗಂಗೊಳ್ಳಿ, ತಲ್ಲೂರು, ಅಂಪಾರು, ಗುಲ್ವಾಡಿ, ಇಡೂರು ಕುಂಜ್ಜಾಡಿ, ಸಿದ್ದಾಪುರ, ಚಿತ್ತೂರು, ಹಕ್ಲಾಡಿ, ಹಟ್ಟಿಯಂಗಡಿ, ಕಾವ್ರಾಡಿ, ಶಂಕರನಾರಾಯಣ, ಆಲೂರು, ಬೈಂದೂರು ಪಟ್ಟಣ ಪಂಚಾಯತ್, ಹೆಮ್ಮಾಡಿ, ಜಡ್ಕಲ್ ಮುದೂರು, ಶಿರೂರು, ಕಟ್ ಬೆಲ್ತೂರು, ಕೊಲ್ಲೂರು, ಖಂಬದಕೋಣೆ, ಉಪ್ಪುಂದ, ಹೊಸಂಗಡಿ, ಆಜ್ರಿ ಗ್ರಾಮ ಪಂಚಾಯತ್ ಸೇರಿದಂತೆ ಹಲವು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಪಿಡಿಒ ಅವರಿಗೆ ದೂರು ಸಲ್ಲಿಸಿದರು.










