ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‌ನಲ್ಲಿ ಪೋಷಕರ ಸಭೆಯನ್ನು ಆಯೋಜಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಣ ತಜ್ಞ, ನಿವೃತ್ತ, ಪ್ರಾಂಶುಪಾಲ ಡಾ. ಜಿ. ಹೆಚ್. ಪ್ರಭಾಕರ ಶೆಟ್ಟಿ ಅವರು ಮಾತನಾಡಿ, ಅಕ್ಷರಾಭ್ಯಾಸದ ಜೊತೆ ಸಂಸ್ಕಾರವನ್ನು ಕೊಟ್ಟು ಮಕ್ಕಳನ್ನು ಬೆಳೆಸಬೇಕು. ಪೋಷಕರು ಮಕ್ಕಳ ಆಸಕ್ತಿಯನ್ನು ತಿಳಿದು ಆ ವಿಷಯದಲ್ಲಿ ಶಿಕ್ಷಣವನ್ನು ನೀಡಬೇಕೆ ಹೊರತು ಮಾನಸಿಕ ಒತ್ತಡವನ್ನು ಹಾಕಬಾರದು ಎಂದು ತಿಳಿಸಿದರು.
ಮಕ್ಕಳ ಮಾನಸಿಕ ಬೆಳವಣಿಗೆಯ ಜೊತೆಗೆ ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕವಾದ ಪೌಷ್ಠಿಕ ಆಹಾರದ ಬಗ್ಗೆ ಪೋಷಕರಿಗೆ ಅರಿವಿರಬೇಕು. ಮಾರುಕಟ್ಟೆಯಲ್ಲಿ ದೊರಯುವ ವಿವಿಧ ಪಾನೀಯಗಳು ಹಾಗೂ ವಿಷಯುಕ್ತ ಕಲಬೆರಕೆ ಆಹಾರದಿಂದ ಮಕ್ಕಳ ಆರೋಗ್ಯದ ಮೇಲಾಗುವ ಪರಿಣಾಮ ಹಾಗೂ ಕಾಯಿಲೆಗಳನ್ನು ನಿದರ್ಶಗಳೊಂದಿಗೆ ತಿಳಿಸಿ ಪೋಷಕರನ್ನು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ ಅವರು ಮಾತನಾಡಿ, ಪೋಷಕರ ಸಹಕಾರಕ್ಕೆ ಕೃತಜ್ಷತೆಗಳನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಇನ್ನಷ್ಟು ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಶಾಲಾ ಪ್ರಾಂಶುಪಾಲರಾದ ಶ್ರೀ ನಿತಿನ್ ಡಿ’ಆಲ್ಮೇಡಾ ಅವರು ಶಾಲಾ ಶೈಕ್ಷಣಿಕ ಕಾರ್ಯ ಯೋಜನೆಗಳ ಹಾಗೂ ಪಠ್ಯೇತರ ಚಟುವಟಿಕೆಗಳ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಿಕ್ಷಕ ಪೋಷಕರ ಸಂವಾದಕ್ಕೆ ಅವಕಾಶ ಮಾಡಿ ಕೊಡಲಾಯಿತು.
ಶಿಕ್ಷಕಿಯರಾದ ಸ್ಮಿತಾ ನಾಕ್ ಕಾರ್ಯಕ್ರಮ ನಿರೂಪಿಸಿದರು, ಪ್ರೇಮಾ ರಾವ್ ಪರಿಚಯಿಸಿ ಸ್ವಾಗತಿಸಿದರು, ಹಾಗೂ ಅಕ್ಷಯ ಶೆಟ್ಟಿ ವಂದಿಸಿದರು.















