ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೋಟರಿ ವಲಯ-1ರ ಸಹಾಯಕ ಗವರ್ನರ್ ಆಗಿ ಐ. ನಾರಾಯಣ ಆಯ್ಕೆಯಾಗಿದ್ದಾರೆ.
ವಲಯ ಒಂದರ ವ್ಯಾಪ್ತಿಯಲ್ಲಿ ಒಟ್ಟು ಎಂಟು ಕ್ಲಬ್‌ಗಳಿಗೆ ಸಹಾಯಕ ಗವರ್ನರ್ ಆಗಿ ಮಾರ್ಗದರ್ಶನ ನೀಡಲಿದ್ದಾರೆ.
2016ರಲ್ಲಿ ರೋಟರಿ ಕ್ಲಬ್ ಬೈಂದೂರಿನ ಸದಸ್ಯರಾಗಿ ರೋಟರಿ ಚಟುವಟಿಕೆಯಲ್ಲಿ ಸಕ್ರಿಯ ತೊಡಗಿಸಿಕೊಂಡ ಅವರು 2015-19ರ ಸಾಲಿಗೆ ಬೈಂದೂರು ರೋಟರಿಯ ಅಧ್ಯಕ್ಷರಾಗಿ ಕ್ಲಬ್ಬನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದರು. ನಂತರದ ವರ್ಷಗಳಲ್ಲಿ ವಲಯ ಮಟ್ಟದ ಹುದ್ದೆಗಳು ಹಾಗೂ ಜಿಲ್ಲಾ ರೋಟರಿ ಲಿಟರಸಿ ಮಿಷನ್ ಇದರ ವೈಸ್ ಚೇರ್ಮನ್ ಆಗಿ, 2024-25ರ ಸಾಲಿನ ಆರ್‌ಐಎಲ್‌ಎಂ ಜಿಲ್ಲಾ ಚೇರ್ಮನ್ ಆಗಿ ರೋಟರಿ ಸೇವೆಯಲ್ಲಿ ಜಿಲ್ಲಾ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ವಿವಿಧ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಅವರು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಹತ್ತು ವರ್ಷ ನಿರ್ದೇಶಕರಾಗಿ, ಒಂದು ಅವಧಿಗೆ ಉಪಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿರುತ್ತಾರೆ.
ಕುಂದಾಪುರ ತಾಲೂಕು ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ, ಕ್ರೀಡಾ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಚುನಾಯಿತ ಪ್ರತಿನಿಧಿಯಾಗಿ, ಕಾರ್ಯನಿರ್ವಹಿಸಿರುತ್ತಾರೆ.
ವೃತ್ತಿಯಿಂದ ನಿವೃತ್ತರಾದ ನಂತರವೂ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರು ಪ್ರಸಕ್ತ ಬೈಂದೂರು ತಾಲೂಕು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ ಸಂಘಟನೆಯನ್ನು ಮುನ್ನಡೆಸುತ್ತಿದ್ದಾರೆ.
ಸುಧೀರ್ಘ 13 ವರ್ಷಗಳ ಕಾಲ ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಹಾಗೂ ಇಲ್ಲಿನ ಗ್ರಾಪಂ ಸದಸ್ಯರಾಗಿ ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಉತ್ತಮ ಕ್ರೀಡಾಪಟುವಾಗಿದ್ದ ಅವರು ರಾಜ್ಯಮಟ್ಟದ ಓಟಗಾರ. ಕಬಡ್ಡಿ, ವಾಲಿಬಾಲ್ ಮತ್ತು ಸೆಟ್ಲ್ ಬ್ಯಾಡ್ಮಿಂಟನ್ ಆಟಗಾರ ಹಾಗೂ ತರಬೇತುದಾರರೂ ಕೂಡ ಹೌದು.















