ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೋಟರಿ ಬಹುದೊಡ್ಡ ಸೇವಾ ಸಂಸ್ಥೆಯಾಗಿದ್ದು ವಿಶ್ವದಾದ್ಯಂತ ನೂರಾರು ಕೊಡುಗೆಗಳನ್ನು ಜನರಿಗೆ ಒದಗಿಸುತ್ತಿದೆ. ವಿವಿಧ ಕ್ಷೇತ್ರದ ಪರಿಣತರನ್ನು ರೋಟರಿ ಸೇವೆಗೆ ಸೇರಿಸಿಕೊಳ್ಳುವ ಮೂಲಕ ಅವರ ಜ್ಞಾನವೂ ಅಗತ್ಯವುಳ್ಳವರಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯಲಿ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಸದಾನಂದ ಚಾತ್ರ ಹೇಳಿದರು.

ಅವರು ಬುಧವಾರ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ನಡೆದ 2025-26ನೇ ಸಾಲಿನ ಪದಪ್ರದಾನ ಸಮಾರಂಭದಲ್ಲಿ ರೋಟರಿ ನೂತನ ಅಧ್ಯಕ್ಷ – ಕಾರ್ಯದರ್ಶಿಗಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದರು. ಬೈಂದೂರಿನಂತಹ ಗ್ರಾಮೀಣ ಪ್ರದೇಶದಲ್ಲಿಯೂ ಸಾಕಷ್ಟು ಸೇವಾ ಕಾರ್ಯಗಳು ರೋಟರಿ ಮೂಲಕ ನಡೆದಿದೆ. ಇದು ಇತರ ಸಂಘ ಸಂಸ್ಥೆಗಳಿಗೆ ಪ್ರೇರಣೆಯಾಗುವಂತಾಗಬೇಕು ಎಂದರು.

ನೂತನ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಝೋನ್ 1ರ ವಲಯ ಸೇನಾನಿ ಪ್ರಸಾದ್ ಪ್ರಭು ರೋಟರಿ ಬುಲೆಟಿನ್ ಬಿಂದುವಾಣಿ ಬಿಡುಗಡೆಗೊಳಿಸಿದರು.


ಮೂವರು ನೂತನ ಸದಸ್ಯರು ಕ್ಲಬ್ಬಿಗೆ ಸೇರ್ಪಡೆಗೊಂಡರು. ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಕಾ ಸಹಾಯಧನ ಹಾಗೂ ಆರೋಗ್ಯ ಸಮಸ್ಯೆ ಉಳ್ಳವರಿಗೆ ವೈದ್ಯಕೀಯ ನೆರವು ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರೋಟರಿ ಕುಟುಂಬಿಕರನ್ನು ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ರೋಟರಿ ವಲಯ-1ರ ಸಹಾಯಕ ಗವರ್ನರ್ ಐ. ನಾರಾಯಣ್ ಉಪಸ್ಥಿತರಿದ್ದರು.



ಪೂರ್ಣಿಮಾ ಪೈ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷ ಶಿರೂರು ಮೋಹನ್ ರೇವಣ್ಕರ್ ಸ್ವಾಗತಿಸಿ, ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಿರ್ಗಮಿತ ಕಾರ್ಯದರ್ಶಿ ಸುನಿಲ್ ಹೆಚ್. ಜಿ. ಬೈಂದೂರು ಹಿಂದಿನ ಸಾಲಿನ ಕಾರ್ಯಚಟುವಟಿಕೆಗಳ ವರದಿ ವಾಚಿಸಿದರು. ಆನಂದ ಮದ್ದೋಡಿ ನಿರೂಪಿಸಿ, ರಾಘವೇಂದ್ರ ಡಿ. ನಾಗೇಂದ್ರ ಬಂಕೇಶ್ವರ ಸಹಕರಿಸಿದರು. ನೂತನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ವಂದಿಸಿದರು.















