ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ರಾಜ್ಯದಲ್ಲಿ ಮಳೆ ಕಡಿಮೆ ಇರುವುದರಿಂದ ಮುಂದೆ ತಲೆದೂರಬಹುದಾದ ವಿದ್ಯುತ್ ಸಮಸ್ಯೆ ನಿವಾರಣೆಗೆ ಈಗಾಗಲೇ ಸೂಕ್ತ ಕ್ರಮ ಕೈಗೊಂಡಿದ್ದು ಡಿಸೆಂಬರ್ 15ರ ಬಳಿಕ ಈ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ರಾಜ್ಯ ಇಂಧನ ಸಚಿವ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಚಂಡಿಕಾ ಯಾಗ ನೆರವೇರಿಸಿ, ದೇವಿ ಮೂಕಾಂಬಿಕೆಗೆ ಪೂಜೆ ಸಲ್ಲಿಸಿದ ಬಳಿಕ ‘ಕುಂದಾಪ್ರ ಡಾಟ್ ಕಾಂ’ನೊಂದಿಗೆ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಈಗಿನಂತೆಯೇ ಮಾಮೂಲಿಯಾಗಿ ವಿದ್ಯುತ್ ನೀಡಲಾಗುವುದು. ಪವರ್‌ಕಟ್ ಸಮಸ್ಯೆ ನಿವಾರಣೆಗೆ ಮುಂಜಾಗ್ರತಾ ಕ್ರಮವಾಗಿ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಶೇಖರಿಸಿಡಲಾಗಿದೆ ಎಂದ ಅವರು ಉಡುಪಿ ಜಿಲ್ಲೆಗೆ ವಿದ್ಯುತ್ ಕೊರತೆ ಸರಿದೂಗಿಸಲು ವಿಶೇಷ ಗಮನ ಹರಿಸಿದ್ದು ಈ ಭಾಗದಲ್ಲಿಯೇ ವಿದ್ಯುತ್ ಉತ್ಪಾದನೆಯಾಗುತ್ತಿರುವುದರಿಂದ ಶಾಸಕ ಪ್ರಮೋದ್ ಮಧ್ವರಾಜ್ ಅವರ ಕೋರಿಕೆಯ ಮೇರೆಗೆ ದಿನದ 24ಗಂಟೆಯೂ ವಿದ್ಯುತ್ ನೀಡುವ ಆದೇಶ ಹೊರಡಿಸಲಾಗಿದೆ ಎಂದರು. ಹೊಸ ಬೆಳಕು ಎಂಬ ಯೋಜನೆಯಡಿಯಲ್ಲಿ ವಿದ್ಯುತ್ ಮಿತ ಬಳಕೆಗಾಗಿ ಎಲ್‌ಇಡಿ ಬೆಲ್ಬ್ ನೀಡುವ ಯೋಜನೆಗೆ ಚಾಲನೆ ನೀಡಲಾಗಿದ್ದು ಇದೇ ತಿಂಗಳ 11ರಂದು ಜನರಿಗೆ ತಲುಪಿಸಲು ಅವಕಾಶ ಮಾಡಿಕೊಡುತ್ತಿದ್ದೇವೆ ಎಂದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ರಮ್ಯಾ ಹೊಸಬೆಳಕು ಯೋಜನೆಯ ರಾಯಭಾರಿಯಾಗಿರುವುದಕ್ಕೆ ಅಪಸ್ವರವಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದ ಇಬ್ಬರು ಜನಪ್ರಿಯ ನಟರನ್ನು ಯೋಜನೆಯ ರಾಯಭಾರಿಯನ್ನಾಗಿ ಆಯ್ದುಕೊಳ್ಳಲಾಗಿದೆ. ರಾಜಕೀಯ ಮಾಡುವವರು ಅಪಸ್ವರವೆತ್ತುತ್ತಿದ್ದಾರೆ. ಆದರೆ ನಮ್ಮ ನಿರ್ಧಾರ ಸರಿಯಾಗಿಯೇ ಇದೆ ಮತ್ತು ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದವರು ಹೇಳಿದರು.
ಪತ್ನಿ ಸಮೀತರಾಗಿ ಆಗಮಿಸಿದ್ದ ಸಚಿವ ಡಿಕೆಶಿ ಬೆಳಿಗ್ಗೆ ಚಂಡಿಕಾಹೋಮ ನೆರವೇರಿಸಿದ ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ಸಚಿವರನ್ನು ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ ಗೌರವಿಸಿದರು. ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಗಾಣಿಗ, ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಅಡಿಗ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಧಾರ್ಮಿಕ ಪರಿಷತ್‌ನ ವಾಸುದೇವ ಯಡಿಯಾಳ್, ಕೊಲ್ಲೂರು ಗ್ರಾ.ಪಂ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಎಸ್. ಕುಮಾರ್, ಜಡ್ಕಲ್ ಗ್ರಾ.ಪಂ.ನ ದೇವಿದಾಸ್, ಕಾಂಗ್ರೆಸ್ ಮುಂದಾಳುಗಳಾದ ದಿನೇಶ್, ಕಿಶನ್ ಹೆಗ್ಡೆ, ಪ್ರಭಾಕರ ಶೆಟ್ಟಿ, ಸೈಮನ್, ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಜೊತೆಗಿದ್ದರು.