ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿ ಹಾಗೂ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ಜಂಟಿ ಆಶ್ರಯದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡ ನಿವೇಶನ ರಹಿತರಿಂದ ಮನೆ, ನಿವೇಶನ ಕೋರಿಕೆಗೆ ಸ್ವೀಕರಿಸಿದ 282 ಅರ್ಜಿಗಳನ್ನು ಅಂತಿಮ ಪಟ್ಟಿ ಸಿದ್ಧ ಪಡಿಸಿ ವರ್ಷ ಒಂದು ಕಳೆದರೂ ಸರಕಾರಿ ಜಾಗ ಗುರುತಿಸಿ ನಿವೇಶನ ರಹಿತರಿಗೆ ಹಕ್ಕು ಪತ್ರ ಕೊಡಲು ಮುಂದಾಗದ ಜಿಲ್ಲಾಡಳಿತ ವಿರುದ್ಧ ಜನವರಿ ತಿಂಗಳಲ್ಲಿ ಬೃಹತ್ ಪ್ರತಿಭಟನಾ ಮುಷ್ಕರ ನಡೆಸುವುದಕ್ಕೆ ಪೂರ್ವಭಾವಿ ತಯಾರಿಗಾಗಿ ನಿವೇಶನ ರಹಿತರ ಸಮಾವೇಶ ಕುಂಭಾಶಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಜರಗಿತು.
ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ, ನಿವೇಶನ ರಹಿತರ ಸಭೆಯನ್ನುದ್ದೇಶಿಸಿ, ಮಾತನಾಡುತ್ತಾ ಕುಂಭಾಶಿ ಗ್ರಾಮದ ನಾಗರಿಕರಿಗೆ ಮೂಲಭೂತ ಸೌಕರ್ಯ ಕೊಡದ ಸ್ಥಳಿಯಾಡಳಿತದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ವೆಂಕಟೇಶ ಕೋಣಿ, ಕಾಂಚನಮಾಲ, ಎಚ್. ನರಸಿಂಹ, ನಾಗರತ್ನ ನಾಡ, ಪದ್ಮಾವತಿ ಶೆಟ್ಟಿ, ಕುಶಲ ಮುಂತಾದವರು ಉಪಸ್ಥಿತರಿದ್ದರು.
ಕೃಷಿ ಕೂಲಿಕಾರರ ಸಂಘದ ಕುಂಭಾಶಿ ಗ್ರಾಮ ಸಮಿತಿ ಅಧ್ಯಕ್ಷೆ ಕಾಂಚನಮಾಲ ಸಭೆಯ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.