ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಪೂರ್ವ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸೋಮವಾರದಂದು ತರಕಾರಿ ದಿನವನ್ನು ಆಚರಿಸಲಾಯಿತು.
ಎಲ್‌ಕೆಜಿ ತರಗತಿಯ ಮಕ್ಕಳು ತರಕಾರಿಯ ಕಟೌಟ್‌ಗಳನ್ನು ಧರಿಸಿ ವೇದಿಕೆಯ ಮೇಲೆ ಹೆಜ್ಜೆ ಹಾಕಿದರು. ಯುಕೆಜಿ ತರಗತಿಯ ಮಕ್ಕಳು ತರಕಾರಿ ವ್ಯಾಪಾರಿಗಳ ವೇಷ ಧರಿಸಿ ತರಕಾರಿಗಳ ಮಹತ್ವವನ್ನು ವಿವರಿಸಿದರು.
ಈ ಚಟುವಟಿಕೆಯ ಒಂದು ಭಾಗವಾಗಿ ತರಕಾರಿ ಮಾರುಕಟ್ಟೆಯ ಸನ್ನಿವೇಶವನ್ನು ನಿರ್ಮಾಣ ಮಾಡಿ, ಮಾರುಕಟ್ಟೆ ವ್ಯವಹಾರದ ಅನುಭವಾತ್ಮಕ ಕಲಿಕೆಗೆ ಅವಕಾಶ ನೀಡಲಾಯಿತು. ನಂತರ ತರಕಾರಿಗಳನ್ನು ಬಳಸಿ ಸಲಾಡ್ ಮಾಡಿ ಮಕ್ಕಳಿಗೆ ವಿತರಿಸಲಾಯಿತು.
ಮಕ್ಕಳು ಈ ಚಟುವಟಿಕೆಯ ಮೂಲಕ ಆರೋಗ್ಯಕರ ಆಹಾರದ ಅವಶ್ಯಕತೆ ಮತ್ತು ತರಕಾರಿಗಳ ಪೋಷಣಾತ್ಮಕ ಮೌಲ್ಯವನ್ನು ಅರಿತರು.
ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿಯರು ಉಪಸ್ಥಿತರಿದ್ದರು.















