ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನೇತೃತ್ವದಲ್ಲಿ, ಕುಂದಾಪ್ರ ಕನ್ನಡ ದಿನದ ಅಂಗವಾಗಿ 2ನೇ ವರ್ಷದ ‘ಲಗೋರಿ’ ಗ್ರಾಮೀಣ ಕ್ರೀಡಾಕೂಟ ಜು.20 ರಂದು ಕುಂದಾಪುರ ಬೋರ್ಡ್ ಹೈಸ್ಕೂಲು ಮೈದಾನದಲ್ಲಿ ಆಯೋಜಿಸಲಾಗಿದೆ ತೆರೆಯ ಮರೆಗೆ ಸರಿಯುತ್ತಿರುವ ಗ್ರಾಮೀಣ ಆಟಗಳನ್ನು ಮತ್ತೆ ಮುನ್ನೆಲೆಗೆ ತರುವುದು ಈ ಕೂಟದ ಉದ್ದೇಶವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು
ಅವರು ಬುಧವಾರ ಇಲ್ಲಿನ ಕಲಾಕ್ಷೇತ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕರ್ಕಾಟಕ ಅಮವಾಸ್ಯೆ ದಿನದಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸಬೇಕೆಂಬ ಇಂಗಿತವನ್ನು ಕುಂದಾಪ್ರ ಕನ್ನಡದ ಭಾಷಾಭಿಮಾನಿಗಳು ವ್ಯಕ್ತಪಡಿಸಿದ್ದರು.
ಅಂದಿನಿಂದ ಜಗತ್ತಿನಾದ್ಯಂತ ಕುಂದಾಪುರ ಭಾಷಿಕರು ಆ ದಿನವನ್ನು ಆಚರಣೆ ಮಾಡಲಾರಂಭಿಸಿ ಕುಂದಾಪುರ ಕನ್ನಡದ ಭಾಷಾಭಿಮಾನ ಗಮನಾರ್ಹವಾಗಿ ಹೆಚ್ಚಾಗಿದೆ. ಕಲಾಕ್ಷೇತ್ರ ಈ ಹಿನ್ನೆಲೆಯಲ್ಲಿ ಇಂದಿನ ಜನಾಂಗ ನೋಡದ ಮತ್ತು ಆಡದ ಆಟಗಳನ್ನು ಭಾಷಾ ಪ್ರೇಮಿಗಳನ್ನು ಒಗ್ಗೂಡಿಸಿ ಆಡಿಸುತ್ತಿದ್ದೇವೆ. ತೆರೆಯ ಮರೆಗೆ ಸರಿದ ಕ್ರೀಡೆಯನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಿದೆ ಎಂದರು.
ಕಳೆದ ವರ್ಷ ಭಾಗವಹಿಸಿದ ಸ್ಪರ್ಧಾಳುಗಳ ಉತ್ಸುಕತೆಯನ್ನು ಗಮನಿಸಿದಾಗಕಳೆದವರ್ಷಕ್ಕಿಂತಲೂ ಹೆಚ್ಚಿನ ಸ್ಪಂದನೆ ಈಬಾರಿಯ ಲಗೋರಿಗೆ ದೊರಕಲಿದೆ ಎಂಬ ಲಕ್ಷಣಗಳು ಕಾಣಿಸುತ್ತಿದೆ. ಇಲ್ಲಿ ಪ್ರಮಾಣ ಪತ್ರ, ಫಲಕ, ನಗದು ಬಹುಮಾನ ಇದ್ದರೂ ಅದು ಸಾಂಕೇತಿಕವಷ್ಟೇ, ಆದರೆ ಅವೆಲ್ಲವನ್ನು ಮೀರಿ ಕುಂದಾಪ್ರ ಭಾಷೆಯ ಅಭಿಮಾನದಿಂದ ಎಲ್ಲರೂ ಭಾಗವಹಿಸುತ್ತಿರುವುದು ಸಂತೋಷದ ಸಂಗತಿ ಒಂದೆಡೆಯಾದರೆ, ಭಾಷೆಯ ಹೆಸರಿನಲ್ಲಿ ಜನರನ್ನು ಬೆಸೆಯುವುದಕ್ಕೆ ಕಲಾಕ್ಷೇತ್ರ ವೇದಿಕೆ ಸೃಷ್ಟಿಸಿಕೊಟ್ಟಿತ್ತಲ್ಲ ಎಂಬ ಖುಷಿ ಇನ್ನೊಂದೆಡೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಶಾಸಕ ಕಿರಣ್ ಕುಮಾರ್ ಕೊಡ್ಲಿ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಮತ್ತು ಇತರ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕಲಾಕ್ಷೇತ್ರ ಸಂಸ್ಥೆಯ ಕೆ.ಆರ್. ನಾಯ್ಕ ದಾಮೋದರ ಪೈ, ಗೋಪಾಲ್ ಪೂಜಾರಿ, ಡಾ. ರಾಜಾರಾಮ ಶೆಟ್ಟಿ, ಪ್ರವೀಣ್ ಚಂದ್ರ ಶೆಟ್ಟಿ, ಜಾಯ್ ಕರ್ವಾಲೊ, ಕಮಲ್‌ಕಿಶೋರ್, ರಾಜೇಶ್ ಕಾವೇರಿ, ರಾಮಚಂದ್ರ, ಸಾಯಿನಾಥ ಶೇಟ್, ಪ್ರವೀಣ್ ಕುಮಾರ್, ಶ್ರೀಧರ ಸುವರ್ಣ ಉಪಸ್ಥಿತರಿದ್ದರು.
ಕ್ರೀಡೆಗಳು:
12 ವರ್ಷದೊಳಗಿನವರಿಗೆ ಗುರಿ ಇಟ್ಟು ಹೊಡೆಯುವುದು, ಚಕ್ರವ್ಯೂಹ, ಗೋಣಿಚೀಲ ಓಟ, ಸೈಕಲ್ ಟಯರ್ ಓಟ, ನಿಮ್ಮ ಕಾಲ್ಗುಣ, 17 ವರ್ಷ ಮೇಲ್ಪಟ್ಟವರಿಗೆ ಉಪ್ಪುಮುಡಿ, ಗೋಣಿಚೀಲ ಓಟ, ಗೂಟ ಸುತ್ತಿ ಓಟ, ಸೈಕಲ್ ಟಯರ್ ಓಟ, ಕಂಬಳ, 65 ವರ್ಷದೊಳಗಿನ ಮುಕ್ತ ವಿಭಾಗದಲ್ಲಿ ಗೋಣಿಚೀಲ ಓಟ, ಕಂಬಳ, ಸೈಕಲ್ ಟಯರ್ ಓಟ, ಗೂಟ ಸುತ್ತಿ ಓಟ, ಉಪ್ಪಮುಡಿ, ಕಣ್ಣುಕಟ್ಟಿ ಮಡಕೆ ಒಡೆಯುವ ಸ್ಪರ್ಧೆಗಳು ನಡೆಯಲಿವೆ. ಅಲ್ಲದೇ ಮುಕ್ತ ವಿಭಾಗದಲ್ಲಿ ಗುಂಪು ಆಟದ ಸ್ಪರ್ಧೆಗಳು ನಡೆಯಲಿದ್ದು, ಪುರುಷರಿಗೆ ಲಗೋರಿ, ಚೆಂಡಾನ್ ಚೆಂಡು, ಹಗ್ಗಜಗ್ಗಾಟ (9 ಮಂದಿ), ಮಹಿಳೆಯರಿಗೆ ಬೆನ್ವೆಂಡು, ಡೊಂಕಾಲು, ಥೋ ಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳಿರುತ್ತದೆ. ಜೊತೆಗೆ ಚೆನ್ನೆಮಣೆ, ಗುಡ್ಡ, ಗೋಲಿ ಆಟಗಳ ಪ್ರದರ್ಶನ ಇರಲಿದೆ.















