ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜು.17: ತಾಲೂಕಿನ ಗಂಗೊಳ್ಳಿ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಮೃತದೇಹಗಳು ಪ್ರತ್ಯೇಕವಾಗಿ ಕೋಡಿ ಸಮೀಪ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.

ಬುಧವಾರ ಬೆಳಿಗ್ಗೆ ಕೋಡಿ ಲೈಟ್ ಹೌಸ್ ಸಮೀಪ ಲೋಹಿತ್ ಖಾರ್ವಿ ಮೃತದೇಹ, ಸಂಜೆ ಹಳೆ ಅಳಿವೆ ಸಮೀಪ ಜಗನ್ನಾಥ ಖಾರ್ವಿ ಮೃತದೇಹ ಪತ್ತೆಯಾಗಿತ್ತು. ಗುರುವಾರ ಬೆಳಿಗ್ಗೆ ಕೋಡಿ ಸೀವಾಕ್ ಸಮೀಪ ಸುರೇಶ್ ಖಾರ್ವಿ ಅವರ ಮೃತದೇಹ ಪತ್ತೆಯಾಗಿದೆ.

ಗಂಗೊಳ್ಳಿ ಬಂದರಿನಿಂದ ಜು.15ರಂದು ಬೆಳಗ್ಗೆ ಶ್ರೀ ಹಕ್ರೇಮಠ ಯಕ್ಷೇಶ್ವರ ಎಂಬ ಹೆಸರಿನ ಗಿಲ್ನೆಟ್ ನಾಡ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ಸಂದರ್ಭ ಗಂಗೊಳ್ಳಿ ಅಳಿವೆ ಬಾಗಿಲಿನಲ್ಲಿ ಅಲೆಗಳ ರಭಸಕ್ಕೆ ಸಿಲುಕಿ ದೋಣಿ ಮಗುಚಿತ್ತು. ದೋಣಿಯಲ್ಲಿದ್ದ ನಾಲ್ವರು ಮೀನುಗಾರರ ಪೈಕಿ ಓರ್ವ ಮೀನುಗಾರ ಈಜಿ ದಡ ಸೇರಿದ್ದರು. ಜಗನ್ನಾಥ ಖಾರ್ವಿ, ಲೋಹಿತ್ ಖಾರ್ವಿ ಹಾಗೂ ಸುರೇಶ್ ಖಾರ್ವಿ ನಪತ್ತೆಯಾಗಿ ಅವರಿಗಾಗಿ ತೀವ್ರ ಶೋಧ ನಡೆಸಲಾಗಿತ್ತು. ಕಾಣೆಯಾದವರನ್ನು ಪತ್ತೆಹಚ್ಚಲು ಡೋನ್ ಮೂಲಕ ಶೋಧ ಕಾರ್ಯ ನಡೆಸಲಾಯಿತು.










