ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮದರ್ ತೆರೆಸಾ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ಅಪಾಯ, ಸೈಬರ್ ಭದ್ರತೆ, ರಸ್ತೆ ಸುರಕ್ಷತೆಯ ನಿಯಮಗಳು ಮತ್ತು ಪೋಕ್ಸೋ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮವು ಪೊಲೀಸ್ ಇಲಾಖಾ ಅಧಿಕಾರಿ ವರ್ಗದವರ ಸಹಕಾರದೊಂದಿಗೆ ಆಯೋಜಿಸಲಾಯಿತು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಂಕರನಾರಾಯಣ ಠಾಣೆಯ ಉಪ ನಿರೀಕ್ಷಕ ತನಿಖಾಧಿಕಾರಿಗಳಾದ ಶಂಭುಲಿಂಗಯ್ಯ ಅವರು ಮಾತನಾಡಿ “ಮಾದಕ ವ್ಯಸನದಿಂದ ದೂರವಿದ್ದು ಜೀವನವನ್ನು ಸಂತೋಷದಿಂದ ಅನುಭವಿಸಿ ” ಎಂದು ಹಿತನುಡಿಗಳನ್ನಾಡಿದರು.
ಶಂಕನಾರಾಯಣ ಪೊಲೀಸ್ ಉಪನಿರೀಕ್ಷಕರಾದ ನಾಸಿರ್ ಹುಸೈನ್ ಅವರು ಮಾತನಾಡಿ, ಇಂದು ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದಾಗಿ ಹಾಗೂ ವಿದ್ಯಾರ್ಥಿಗಳ ಅತಿಯಾದ ಮೊಬೈಲ್ ಬಳಕೆಯಿಂದ ಆಗುವ ಅನಾಹುತಗಳು, ಮೊಬೈಲ್ ಗೇಮಿಂಗ್ ಅಪಾಯಗಳ ಬಗ್ಗೆ ತಿಳಿ ಹೇಳುವುದರ ಮೂಲಕ ಅದನ್ನು ಹೇಗೆ ಜವಾಬ್ದಾರಿಯಿಂದ ಬಳಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುಂದಾಪುರ ಪೋಲಿಸ್ ವೃ ತ್ತ ನಿರೀಕ್ಷಕರಾದ ಜಯರಾಮ್ ಬಿ. ಗೌಡ ಅವರು ರಸ್ತೆ ನಿಯಮಗಳ ಉಲ್ಲಂಘನೆಯಿಂದಾಗಿ ಆಗುವ ಅನಾಹುತಗಳ ಬಗ್ಗೆ ಮಾತನಾಡುತ್ತಾ ನಮ್ಮ ಜೀವದ ರಕ್ಷಣೆಗೆ ರಸ್ತೆ ನಿಯಮಗಳ ಪಾಲನೆ ಅಗತ್ಯ ಎಂದು ತಿಳಿಸುತ್ತಾ ಲೈಸನ್ಸ್ ರಹಿತ ವಾಹನ ಚಾಲನೆ ತಪ್ಪು ಎನ್ನುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು ಮತ್ತು ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸುತ್ತ ‘ಪೋಕ್ಸೋ ಕಾಯ್ದೆ ಮಕ್ಕಳಿಗೆ ಕಾನೂನು ಕವಚ’ ಮಕ್ಕಳಿಗೆ ಭಯವಿಲ್ಲದ ಬದುಕು ಕಟ್ಟಿಕೊಡುವುದು ನಮ್ಮ ಕರ್ತವ್ಯ ಎಂದರು .

ವಿದ್ಯಾದದಾತಿ ವಿನಯಂ, ವಿನಯಾಧ್ಯಾತಿ ಪಾತ್ರತ್ವಂ, ಪಾತ್ರತ್ವಾ ಧನಮಾಪ್ನೋತಿ, ಧನಾಧರ್ಮ ಮಹತಹ ಸುಖಂ!! ಎಂಬ ಸುಭಾಷಿತದ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗಿನ ವಿನಯದ ಮಹತ್ವವನ್ನು ಮನಮುಟ್ಟುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯವರು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಮದರ್ ತೆರೇಸಾ ಮೆಮೋರಿಯಲ್ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಉಪನ್ಯಾಸಕ, ಶಿಕ್ಷಕ ವೃಂದ ದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ವೈಶಾಲಿ ಎಸ್. ಶೆಟ್ಟಿ ನಿರೂಪಿಸಿ, ಭಾಷಾ ಹಾಗೂ ಸಾಂಸ್ಕೃತಿಕ ನಿರ್ದೇಶಕಿ ಅಲಿಟಾ ಡೇಸಾರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.















