ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೇಂದ್ರ ಸರಕಾರದ ಬಡವರ ಕಲ್ಯಾಣಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು ಅದರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ ಪಟ್ಟಣ ವ್ಯಾಪ್ತಿಯ ಬಡವರಿಗೆ ಸೂರು ಕಲ್ಪಿಸುವ ಮಹತ್ತರ ಯೋಜನೆಯಾಗಿದೆ ಎಂದು ಉಡುಪಿ – ಚಿಕ್ಮ ಮಗಳೂರು ಲೋಕಸಭಾ ಕ್ಷೇತ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ (ನಗರ)2.0 ಯೋಜನೆಯನ್ನು ಅನುಷ್ಠಾನಗೊಳಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಆವಾಸ್ ಯೋಜನೆಯ ಫಲಕವನ್ನು ಅನಾವರಣಗೊಳಿಸಿ ಮಾತನಾಡಿದರು.
ಈ ಯೋಜನೆಯ ಅನುಷ್ಠಾನ ಹಾಗೂ ಯಾವುದೇ ರಾಜಕಾರಣಗೊಳಿಸದೆ ಫಲಾನುಭವಿಗಳಿಗೆ ಸೂಕ್ತ ನೆರವು ಕಲ್ಪಿಸಲು ಸಂಸದರು ಮನವಿ ಮಾಡಿದರು.ಕೇಂದ್ರ ಸರಕಾರ ಈಗಾಗಲೇ 1ಕೋಟಿ ಮನೆ ಗುರಿ ಹೊಂದಿದ್ದು ಅಧಿಕಾರಿಗಳು ಸ್ಥಳೀಯಾಡಳಿತ ಜನಪ್ರತಿನಿಧಿಗಳು ಫಲಾನುಭವಿಗಳಿಗೆ ಕರಾರುವಾಕ್ಕಾಗಿ ಯೋಜನೆ ತಲುಪಿಸಲುಕರೆ ನೀಡಿದರು.
ಕಾರ್ಯಕ್ರಮವನ್ನು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಉಡುಪಿ ನಗರಾಭಿವೃದ್ಧಿ ಕೋಶದ ಆಯುಕ್ತ ಕಾಶಿನಾಥ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಭೆಯಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ,ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಸೂಯ ಹೇರ್ಳೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮೋಹನ್ ರಾಜ್, ಜಿಲ್ಲೆಯ ವಿವಿಧ ನಗರ ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಭಾಗವಹಿದ್ದರು.
ಕಾರ್ಯಕ್ರಮವನ್ನು ಪಟ್ಟಣಪಂಚಾಯತ್ ಸಿಬ್ಬಂದಿ ಸುಮಿತ ನಿರೂಪಿಸಿ, ಉಡುಪಿ ನಗರಸಭೆಯ ಪೌರಾಯುಕ್ತರಾದ ಮಹಾಂತೇಶ್ ಹಂಗರಗಿ ಸ್ವಾಗತಿಸಿ, ಸಿಬ್ಬಂದಿ ಚಂದ್ರಶೇಖರ್ ಸೋಮಯಾಜಿ ವಂದಿಸಿದರು.















