ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಸ್. ಪ್ರಕಾಶ್ಚಂದ್ರ ಶೆಟ್ಟಿ ಒಬ್ಬ ಕಾಯಕ ಯೋಗಿ. ಅಪ್ಪಟ ಕೃಷಿಕ, ಹೈನುಗಾರ. ಅರ್ಹ ವಾಗಿ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಸಂದಿದೆ. ತಾಲೂಕಿನ 23 ಕೃಷಿ ಪತ್ತಿನ ಸಹಕಾರ ಸಂಸ್ಥೆಗಳು ಅವರನ್ನು ಸನ್ಮಾನಿಸಿದ್ದರಿಂದ ಸನ್ಮಾನದ ಗೌರವ ಹೆಚ್ಚಿದೆ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ಹೇಳಿದರು.
ಅವರು ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಭವನದ ಸಭಾಂಗಣದಲ್ಲಿ ಅವಿಭಜಿತ ಕುಂದಾಪುರ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳು ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರಕಾರದ 2024-25ನೇ ಸಾಲಿನ ʼಸಹಕಾರ ರತ್ನ ಪ್ರಶಸ್ತಿʼ ಪುರಸ್ಕೃತ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರ ಅಭಿನಂದನೆ ಸಮಾರಂಭದಲ್ಲಿ ಭಾನುವಾರ ಅಭಿನಂದನಾ ಭಾಷಣ ಮಾಡಿದರು.
ಸಂಕಷ್ಟದಲ್ಲಿದ್ದ ಖಂಬದಕೋಣೆ ರೈತರ ಸೇವಾ ಸಂಘವನ್ನು ರಾಜ್ಯದಲ್ಲೇ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿ ಕಟ್ಟಿ ಬೆಳೆಸಿದ ಪರಿ, ಹೈನುಗಾರಿಕೆಯಲ್ಲಿ ರಾಜ್ಯದಲ್ಲಿ ಮಾಡಿರುವ ಅಪರಿಮಿತ ಸಾಧನೆ, ಒಬ್ಬ ಕೃಷಿಕನಾಗಿ ಕೃಷಿ ತಾಕು ಪರಿವರ್ತಿಸಿದ್ದನ್ನು ಇಡಿ ದೇಶ ನೋಡುವಂತದ್ದು. ಸ್ವಾಭಿಮಾನ, ನೇರ ನಡೆನುಡಿ, ನಿಷ್ಠುರವಾದಿಯಾಗಿದ್ದರು. ಅವಿಭಜಿತ ದ.ಕ. ಜಿಲ್ಲೆಯ ಒಬ್ಬ ಸಹಕಾರ ಶಕ್ತಿಯಾಗಿ ಅವರು ಪ್ರಕಾಶಿಸುತ್ತಿದ್ದಾರೆ ಎಂದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಮಾತನಾಡಿ, ಇಂದು ಸನ್ಮಾನ, ಗೌರವಗಳು ನಡೆಯುತ್ತಿರುತ್ತದೆ. ಅದು ಬೇರೆ ಬೇರೆ ಕಾರಣ ಹೊಂದಿರುತ್ತದೆ. ಆದರೆ ಇಂದು ನಡೆದ ಈ ಸನ್ಮಾನ ಅರ್ಥಪೂರ್ಣ, ನಿಜವಾದ ಅರ್ಹ ವ್ಯಕ್ತಿಗೆ ಸನ್ಮಾನ ನಡೆದಿದೆ. ಇದರಿಂದ ಸನ್ಮಾನದ ತೂಕ ಹೆಚ್ಚಿದೆ. ಅವರ ಸಾಧನೆಯ ಹೆಜ್ಜೆಗಳು ಮತ್ತಷ್ಟು ಬೆಳಗಲಿ ಎಂದು ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಎಂ.ಮಹೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಸುಮಂಗಲಿಯರು ಆರತಿ ಬೆಳ ಬೆಳಗಿದರು. ಗಣೇಶ್ ಗಂಗೊಳ್ಳಿ ಶೋಭಾನೆ ಹಾಡು ಹಾಡುವ ಮೂಲಕ ಸನ್ಮಾನ ಹೃದಯಸ್ಪರ್ಶಿಗೊಳಿಸಿದರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನೌಕರರು ಗೌರವಿಸಿದರು.
ತಾಲೂಕಿನ ನಾನಾ ಸಹಕಾರಿ ಸಂಘಗಳ ಅಧ್ಯಕ್ಷರಾದ ಕೆದೂರು ಸದಾನಂದ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಗುಡಿಬೆಟ್ಟು ಪ್ರದೀಪ್ ಶೆಟ್ಟಿ, ಕೃಷ್ಣಮೂರ್ತಿ ಕುಂದಾಪುರ, ಬೆಳೆ ಜಯರಾಮ ಶೆಟ್ಟಿ, ಹಕ್ಲಾಡಿ ಸಂತೋಷ್ ಕುಮಾರ್ ಶೆಟ್ಟಿ, ಬಾಂಡ್ಯ ಸುಧಾಕರ ಶೆಟ್ಟಿ, ಮಂಜಯ್ಯ ಶೆಟ್ಟಿ ಸಬ್ಲಾಡಿ, ಮಂಜಯ್ಯ ಶೆಟ್ಟಿ ಹರ್ಕೂರು, ನಾರಾಯಣ ಹೆಗ್ಡೆ ಬೈಂದೂರು, ಶೀನ ಪೂಜಾರಿ ಬನ್ನೂರು, ಸದಾನಂದ ಬಳ್ಳೂರು, ಜಗದೀಶ್ ಪೂಜಾರಿ ಮರವಂತೆ, ಸದಾನಂದ ಶೆಟ್ಟಿ ಅಮಾಸೆಬೈಲು, ಪ್ರದೀಪ ಯಡಿಯಾಳ ಮಾನಂಜೆ, ವಿಜಯಶಾಸ್ತ್ರಿ ಮುದೂರು, ರಾಜೇಶ್ ಹೆಬ್ಬಾರ್ ಉಳ್ಳೂರು 74, ಪ್ರಭಾಕರ ಶೆಟ್ಟಿ ಜಡ್ಕಲ್, ಚಂದ್ರಶೇಖರ ಅಡಿಗ ಕೊಲ್ಲೂರು, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ವಿಷ್ಣು ಪೈ ಉಪಸ್ಥಿತರಿದ್ದರು.
ಗಣೇಶ್ ಗಂಗೊಳ್ಳಿ ರೈತಗೀತೆ ಹಾಡಿದರು. ಗಾಯತ್ರಿ ಆಚಾರ್ಯ ಪ್ರಾರ್ಥಿಸಿದರು. ಆಕಾಶವಾಣಿಯ ರೇವತಿ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ಕೋಟೇಶ್ವರ ವಿಎಸ್ಎಸ್ ಸಿಇಓ ವಿಶ್ವೇಶ್ವರ ಐತಾಳ ಸ್ವಾಗತಿಸಿದರು.















