ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಹಿರಿಯ ಕೃಷಿಕ, ಉದ್ಯಮಿ, ಬೈಂದೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು (64) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳವಾಡಿಯ ಸಸಿಹಿತ್ಲು ಕುಟುಂಬದವರಾದ ವೆಂಕಟ ಪೂಜಾರಿ ಅವರು ಬೈಂದೂರಿನ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕಂಬಳ ಹಾಗೂ ಕ್ರೀಡಾ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಉಡುಪಿ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರತಿನಿಧಿಯಾಗಿ, ಬೈಂದೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷರಾಗಿ, ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷರಾಗಿ ಸಕ್ರಿಯವಾಗಿದ್ದರು. ಕಳೆದ 25ವರ್ಷಗಳಿಂದ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದರು. ಎರಡು ಭಾರಿ ಬೈಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿದ್ದರು.
ಕಂಬಳ ಕ್ರೀಡೆಯಲ್ಲಿ ವೆಂಕಟ ಪೂಜಾರಿ ಅವರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಅವರ ಪ್ರೀತಿಯ ಕೋಣಗಳು ಸ್ವರ್ಧೆಗಿಳಿಸಿದರೇ ಗೆಲುವು ಸಾಧಿಸದೇ ಕಂಬಳಗದ್ದೆಯ ಅಂಚು ತಲುಪಿದ್ದು ಅಪರೂಪ. ಕಳೆದ 35 ವರ್ಷಗಳಿಂದ ನಿರಂತರವಾಗಿ ಹಲವು ಸಾಂಪ್ರದಾಯಿಕ ಹಾಗೂ ಸ್ಪರ್ಧಾ ಕಂಬಳಗಳಲ್ಲಿ ಭಾಗವಹಿಸಿದ ಹಿರಿಮೆ ಹೊಂದಿದ್ದರು. ಸ್ವತಃ ಕಬಡ್ಡಿ ಕ್ರೀಡಾಪಟುವಾದ ವೆಂಕಟ ಪೂಜಾರಿ ಅವರು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದರು.
ಅವರು ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರು ಹಾಗೂ ಸಹೋದರ – ಸಹೋದರಿಯರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ:
ಗುರುವಾರ ಬೆಳಿಗ್ಗೆ 8-00ಗಂಟೆಗೆ ವೆಂಕಟ ಪೂಜಾರಿ ಅವರ ಅಂತ್ಯಕ್ರಿಯೆ ಅವರ ಕಳವಾಡಿ ಸಸಿಹಿತ್ಲು ನಿವಾಸದಲ್ಲಿ ನಡೆಯಲಿದೆ.















