ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮುದಾಯದೊಳಗಿನ ಉದಾರ ಮನಸ್ಸಿನ ಉಳ್ಳವರಿಂದ ದೇಣಿಗೆಯ ರೂಪದಲ್ಲಿ ಆರ್ಥಿಕ ನೆರವು ಪಡೆದು ಇಲ್ಲದವರಿಗೆ ನೆರವಾಗುವ ಹಂತದಲ್ಲಿ ಸಂಘವು ನಿರ್ವಹಿಸಿರುವ ಕೆಲಸಗಳ ಬಗ್ಗೆ ಆತ್ಮತೃಪ್ತಿಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಂಘವು ತನ್ನಲ್ಲಿರುವ ಮಿತ ಆರ್ಥಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಬಡ ಕುಟುಂಬಗಳ ಆರೋಗ್ಯ ಸಮಸ್ಯೆಗಳಿಗೆ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ, ವಿಶೇಷ ಚೇತನರ ನಿರೀಕ್ಷೆಗಳಿಗೆ ಬಹುಮುಖಿಯಾಗಿ ಸ್ಪಂದಿಸಿದೆ ಎಂದು ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆ ಹೇಳಿದರು.
ಅವರು ಯಡ್ತರೆ ಬಂಟರ ಸಮುದಾಯ ಭವನದಲ್ಲಿ ಬುಧವಾರ ಸಂಜೆ ಬಂಟರ ಯಾನೆ ನಾಡವರ ಸಂಘದ 30ರ ಸಂಭ್ರಮ 2025ರ ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

30ನೇ ವರ್ಷದ ಸಂಭ್ರಮದ ಕಾರ್ಯ ನಿರ್ವಹಣೆಯ ಅವಧಿ ಹಲವು ಬಗೆಯ ಸವಾಲುಗಳಿಗೆ ಮುಖಾಮುಖಿಯಾದದ್ದು. ಸಂಘದ ಚಟುವಟಿಕೆಗಳನ್ನು ರಚನಾತ್ಮಕವಾಗಿ ಕಟ್ಟುವುದು ಒಂದು ವಿಧದ ಗುಣಾತ್ಮಕ ಸವಲಾಗಿ ಪರಿಣಮಿಸಿತು. ಈ ನಡುವೆಯೂ ಸಮುದಾಯ ಭಾಂದವರ, ದಾನಿಗಳ ನೆರವು ಮತ್ತು ಮಾರ್ಗದರ್ಶನದ ಪರಿಣಾಮವಾಗಿ 30ನೇ ವರ್ಷದ ಸಂಭ್ರಮದ ಅವಧಿಯಲ್ಲಿ ಒಂದಿಷ್ಟು ಶೈಕ್ಷಣಿಕ, ಸಮಾಜಮುಖಿ ಹಾಗೂ ಪರಿಸರ ಕೇಂದ್ರಿತ ಕೆಲಸಗಳನ್ನು ನಿರ್ವಹಿಸಲು, ಅಶಕ್ತರಿಗೆ ಹಾಗೂ ಅವಕಾಶಗಳಿಂದ ವಂಚಿತರಾದವರಿಗೆ ಆರ್ಥಿಕ ನೆರವು ನೀಡಲು ಸಾಧ್ಯವಾಯಿತು ಎಂದರು.
ಸಂಘದ ಉಪಾಧ್ಯಕ್ಷ ಹಾಗೂ 30ರ ಸಂಭ್ರಮದ ಸಂಚಾಲಕ ಕುದ್ರುಕೋಡು ಜಗದೀಶ್ ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ನಿತಿನ್ ಬಿ. ಶೆಟ್ಟಿ, 30ರ ಸಂಭ್ರಮ ಸಮಿತಿಯ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಗಾಯಾಡಿ ಸೇರಿದಂತೆ ಸಂಘದ ವಿವಿಧ ಹಂತದ ಪದಾಧಿಕಾರಿಗಳು ಇದ್ದರು.
ಜುಲೈ 27ರಂದು ಹೆಮ್ಮಾಡಿ ಜ್ಯುವೆಲ್‌ಪಾರ್ಕನ ಜಯಶ್ರೀ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆ ಅಧ್ಯಕ್ಷತೆಯಲ್ಲಿ ಶಾಸಕ ಗುರುರಾಜ ಗಂಟಿಹೊಳೆ ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಲಿದ್ದಾರೆ.
ಮಾಜಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ದೀಪ ಪ್ರಜ್ವಲಿಸಲಿದ್ದು, ಘಟಪ್ರಭಾ ಉದ್ಯಮಿ ಎಚ್. ಜಯಶೀಲ ಎನ್. ಶೆಟ್ಟಿ ಪ್ರಾಸ್ತಾವಿಸಲಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ, ಉದ್ಯಮಿಗಳಾದ ಕೆ. ಪ್ರಕಾಶ ಶೆಟ್ಟಿ, ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ವಕ್ವಾಡಿ ಪ್ರವೀಣ್‌ಕುಮಾರ್ ಶೆಟ್ಟಿ, ಡಾ. ದಿನಕರ ಶೆಟ್ಟಿ ಬಗ್ವಾಡಿ ಉಪಸ್ಥಿತರಿರಲಿದ್ದಾರೆ. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿ. ಎ. ಅಶೋಕಕುಮಾರ್ ಶೆಟ್ಟಿ ಪ್ರೇರಣಾ ನುಡಿಗಳನ್ನಾಡಲಿದ್ದಾರೆ.
ಸಂಜೆ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದ್ದು, ಉದ್ಯಮಿ, 30ರ ಸಂಭ್ರಮದ ಸಂಚಾಲಕ ಕುದ್ರುಕೋಡು ಜಗದೀಶ ಶೆಟ್ಟಿ ಸಮಾರೋಪ ಭಾಷಣ ಮಾಡಲಿದ್ದಾರೆ.
ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ, ಮಂಗಳೂರು ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಹೆಗ್ಡೆ, ಕುಂದಾಪುರ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಈ ವೇಳೆ ಬೇಲ್ತೂರು ನಾಗಯ್ಯ ಶೆಟ್ಟಿ ಸಾಲ್ಗದ್ದೆ ಸ್ಮರಣಾರ್ಥ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ, 30ರ ಸಂಭ್ರಮದ ’ತ್ರೈಂತತಿ’ ವಿಶೇಷ ಪ್ರಶಸ್ತಿ ಪ್ರದಾನ, ವಿಶೇ? ನ್ಯೂನತೆಯುಳ್ಳ ಆಯ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಿವಿಧ ಕ್ಷೇತ್ರಗಳಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಸಾಧಕ ಪ್ರಶಸ್ತಿ ಪ್ರದಾನ, ಪ್ರತಿಭಾನ್ವಿತ ಹಿಂದುಳಿದ ಆಯ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ, ನಿವೃತ್ತ ನೌಕರರಿಗೆ ಸನ್ಮಾನ ವಿಜೇತ ಸ್ಪರ್ಧಾ ತಂಡಗಳಿಗೆ ಬಹುಮಾನ ವಿತರಣೆ ನಡೆಯಲಿದೆ.














