ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇದಿಕೆ ಹಾಗೂ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಅರ್ಥಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೋಮವಾರ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಜರುಗಿತು.
ಕಾರ್ಯಗಾರದ ಉದ್ಘಾಟನೆಯನ್ನು ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಪರವಾಗಿ ಕಾರ್ಕಳದ ಉದ್ಯಮಿ ಸೂರಜ್ ಶೆಟ್ಟಿ ನೆರವೇರಿಸಿ ಮಾತನಾಡಿ,” ಮನೆ ಬಜೆಟ್ ನಿಂದ ಹಿಡಿದು ರಾಷ್ಟ್ರದ ಬಜೆಟ್ ತನಕ ಎಲ್ಲದರ ಹಿಂದೆ ಅರ್ಥಶಾಸ್ತ್ರದ ತತ್ವಗಳು ಕಾರ್ಯನಿರ್ವಹಿಸುತ್ತವೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿಶ್ಲೇಷಣಾ ಕೌಶಲ್ಯ, ಆರ್ಥಿಕ ತರ್ಕ ಮತ್ತು ನಿರ್ಣಾಯಕತೆ ಅಗತ್ಯ ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ) ಉಡುಪಿ ಜಿಲ್ಲೆಯ ಉಪನಿರ್ದೇಶಕರಾದ ಮಾರುತಿ ಅವರು ಮಾತನಾಡಿ, ” ಅರ್ಥಶಾಸ್ತ್ರ ಮತ್ತು ಆರ್ಥಿಕತೆ ಎಂದರೆ ಕೇವಲ ಹಣದ ಚಲಾವಣೆ ಅಲ್ಲ, ಅದು ನಮ್ಮ ಆಯ್ಕೆಗಳು, ಆದ್ಯತೆಗಳು ಮತ್ತು ಜೀವನ ಪಾಠಗಳ ಚಿಹ್ನೆಯಾಗಿದೆ ” ಎಂದು ಹೇಳುತ್ತಾ ಜಾಗತಿಕ ಆರ್ಥಿಕತೆಯ ಪ್ರವಾಹದಲ್ಲಿ ಹೇಗೆ ಸಮತೋಲನ ವಹಿಸಬೇಕು ಎಂದು ತಿಳಿಸಿದರು.
ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರೂ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಅವರು ಅರ್ಥಶಾಸ್ತ್ರದ ಮಹತ್ವ, ಅದರ ಪ್ರಾಯೋಗಿಕ ಬಳಕೆ ಹಾಗೂ ಅರ್ಥಶಾಸ್ತ್ರವನ್ನು ವೃತ್ತಿಯಾಗಿ ಹೇಗೆ ಆಚರಿಸಬಹುದು ಎಂಬುದರ ಕುರಿತು ಮಾತುಗಳನ್ನಾಡಿದರು.
ಕಾರ್ಯಗಾರದಲ್ಲಿ 2025ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ 100 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಲ್ಲದೆ 2025 ನೇ ಸಾಲಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಶೇ. 100 ಫಲಿತಾಂಶ ಸಾಧಿಸಿದ ಕಾಲೇಜುಗಳ ಉಪನ್ಯಾಸಕರನ್ನು ಪುರಸ್ಕರಿಸಿ ಗೌರವಿಸಲಾಯಿತು.
2025ರಲ್ಲಿ ಅರ್ಥಶಾಸ್ತ್ರ ವಿಷಯದಿಂದ ಪ್ರಾಂಶುಪಾಲರಾಗಿ ಮುಂಬಡ್ತಿ ಹೊಂದಿದ ಶ್ರೀ ವಿನ್ಸೆಂಟ್ ವಿನೋದ್ ಡಿಸೋಜಾ, ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು, ಬೆಳ್ಮಣ್ಣು ಅವರನ್ನು ಅಭಿನಂದಿಸಲಾಯಿತು.
2025ನೇ ಸಾಲಿನಲ್ಲಿ ವಯೋನಿವೃತ್ತಿ ಹೊಂದುತ್ತಿರುವ ಹೊಸಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗೋಪಾಲ್ ಭಟ್ ಮತ್ತು ಗೋಳಿಯಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ವೈದ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಗಾರದಲ್ಲಿ ಪೂರ್ವಾಹ್ನ ” ಎರಡನೇ ವರ್ಷದ ಅರ್ಥಶಾಸ್ತ್ರದಲ್ಲಿ ಗಣಿತದ ಸಮಸ್ಯೆಗಳಿಗೆ ಪರಿಹಾರ ” ಎಂಬ ವಿಚಾರದ ಕುರಿತು ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರದ ಅರ್ಥಶಾಸ್ತ್ರ ಉಪನ್ಯಾಸಕರಾದ ದಿನಕರ ಶೆಟ್ಟಿ ಅವರು ವಿಚಾರ ಮಂಡಿಸಿದರು.
ಅಪರಾಹ್ನ ” ಹೊಸ ಪ್ರಶ್ನೆ ಬ್ಯಾಂಕ್ ಮತ್ತು ಪ್ರಶ್ನೆ ಪತ್ರಿಕೆ ತಯಾರಿಕೆಗೆ ಸಂಬಂಧಿಸಿದ ಮಾಹಿತಿಗಳು ” ಎಂಬ ವಿಚಾರದ ಕುರಿತು ಸರ್ಕಾರಿ ಸ್ವತಂತ್ರ ಪಿ.ಯು. ಕಾಲೇಜು, ಹಾಸನದ ಅರ್ಥಶಾಸ್ತ್ರ ಉಪನ್ಯಾಸಕರಾದ ಧರ್ಮೇಂದ್ರ ಬಿ.ಜಿ ಅವರು ವಿಚಾರ ಮಂಡಿಸಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಗಾರದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಮಂಡಳಿ, ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರು, ಕ್ರಿಯೇಟಿವ್ ಕಾಲೇಜಿನ ಬೋಧಕ- ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷೆ ಅನುರಾಧ. ಎಚ್. ಸ್ವಾಗತಿಸಿ, ಉಪನ್ಯಾಸಕಿ ಜ್ಯೋತಿ ಕೊಲ್ಲೂರು ವಂದಿಸಿದರು.















