ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿ ಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ (ಪ್ರಾಥಮಿಕ ವಿಭಾಗ)ಯಲ್ಲಿ ಪಾಲಕ-ಶಿಕ್ಷಕರ ಭೇಟಿ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜೊತೆಗೆ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತು ಪಾಲಕರ ಜವಾಬ್ದಾರಿಯನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ಡಾ. ವೈಶಾಲಿ ಮತ್ತು ಅವರ ವೈದ್ಯಕೀಯ ತಂಡದ ಸದಸ್ಯರು ಪಾಲಕರಿಗೆ ಮಕ್ಕಳ ಆರೋಗ್ಯ ಸಂಬಂಧಿತ ಅಮೂಲ್ಯ ಮಾಹಿತಿಯನ್ನು ನೀಡಿದರು.
ಅಶ್ವಿನಿ ಪೈ ಅವರು ಮಕ್ಕಳಿಗೆ ನೀಡಬೇಕಾದ ಸಮತೋಲಿತ ಆಹಾರ ಹಾಗೂ ಅಸಾಂಕ್ರಾಮಿಕ ಕಾಯಿಲೆಗಳು ಬಾರದಂತೆ ಹೇಗೆ ತಡೆಗಟ್ಟಬಹುದೆಂಬುದನ್ನು ವಿವರಿಸಿದರು.
ಅರುಣ್ ಕುಮಾರ್ ಎಸ್. ಅವರು ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹ ಹಾಗೂ ಅತಿಯಾದ ತೂಕದ ಸಮಸ್ಯೆಗಳ ಕುರಿತು ಹೇಳುತ್ತಾ, ದಿನನಿತ್ಯ ವ್ಯಾಯಾಮದ ಅವಶ್ಯಕತೆ ಮತ್ತು ಅದರ ಪ್ರಯೋಜನಗಳನ್ನು ತಿಳಿಸಿದರು.
ಋತುಜಾ ಎಸ್. ರಾವ್ ಅವರು ಮದ್ಯಪಾನ ಹಾಗೂ ಮಾದಕ ವಸ್ತುಗಳ ಬಳಕೆಯಿಂದ ಮಕ್ಕಳ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಮಾತನಾಡುತ್ತಾ, ಪೋಷಕರಿಗೆ ತಮ್ಮ ಜವಾಬ್ದಾರಿಯನ್ನು ಜಾಗೃತವಾಗಿ ನಿರ್ವಹಿಸುವಂತೆ ಪ್ರೇರೇಪಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ಸುಜಾತಾ ಸದಾರಾಮ ಅವರು ಸಭೆಯನ್ನುದ್ದೇಶಿಸಿ ಬೆಳೆಯುವ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುವಂತೆ ಹಾಗೂ ಅವರು ಆಟೋಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಾಥಮಿಕ ಶಾಲಾ ವಿಭಾಗದ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅರ್ಚನಾ ಮತ್ತು ರೋಹಿಣಿ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.















