ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಧನೆ ಸುಲಭದ ಮಾತಲ್ಲ. ಕೇವಲ ಪ್ರತಿಭೆಯಿಂದ ಮಾತ್ರ ಯಶಸ್ಸು ಕಾಣಲಾಗದು. ಕಠಿಣ ಪ್ರಯತ್ನದಿಂದ ಮಾತ್ರ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ. ಜಗತ್ತಿನಲ್ಲಿ ಯಾವುದೂ ಕೂಡ ಸುಲಭವಾಗಿ ದಕ್ಕುವುದಿಲ್ಲ. ನಾವು ಸ್ವೀಕರಿಸುವ ರೀತಿ ಮತ್ತು ಸಾಧಿಸುವ ಛಲ. ಸತತ ಪರಿಶ್ರಮ ಬದುಕಿಗೆ ಸಾರ್ಥಕತೆಯನ್ನು ನೀಡುತ್ತದೆ ಎಂದು ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ ಹೇಳಿದರು
ಅವರು ಇಲ್ಲಿನ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಸಂಘದ ಪ್ರಧಾನ ಕಛೇರಿಯಲ್ಲಿ ಸೊಸೈಟಿ ವತಿಯಿಂದ ಕೊಡಮಾಡುವ ವಿದ್ಯಾರ್ಥಿ ವೇತನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿ ಕಠಿಣ ಪ್ರಯತ್ನದ ಮೂಲಕ ಬೆಳೆಯಬೇಕು. ಸಾರ್ಥಕತೆಯ ಸಂತ್ರಪ್ತಿ ದೊರೆಯಬೇಕಾದರೆ ಸಾಧನೆಯ ಬದುಕು ನಮ್ಮದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ, ಮಕ್ಕಳು ಸಮಾಜಕ್ಕೆ ಶಕ್ತಿ ತುಂಬುವ ಆಸ್ತಿಯಾಗಬೇಕು. ಭಾರತೀಯ ಸಂಸ್ಕೃತಿ ಆಧಾರಿತ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ದೇಶಪ್ರೇಮ ಬೆಳೆಸಲು ಪೋಷಕರು ಸಹಕರಿಸಬೇಕು. ಗುರುಹಿರಿಯರನ್ನು ಗೌರವಿಸುವ ಪ್ರವೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಬಾಲ್ಯದಲ್ಲಿ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ಮಕ್ಕಳು ದಾರಿ ತಪ್ಪದಂತೆ ಎಚ್ಚರವಹಿಸಬೇಕು ಎಂದರು.
ಈ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ನಿಧಿಶ್ರೀ ಬಿಜೂರು ಅವರನ್ನು ಸನ್ಮಾನಿಸಲಾಯಿತು.
ಸಂಘದ ಅರ್ಹ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಉದ್ಯಮಿ ಸೂಲ್ಯಯಣ್ಣ ಶೆಟ್ಟಿ, ಉದ್ಯಾವರ ಎಸ್‌ಡಿಎಂ ಆರ್ಯುವೇದ ಕಾಲೇಜಿನ ಅಧೀಕ್ಷಕ ಡಾ. ನಾಗರಾಜ, ಸಂಘದ ಉಪಾಧ್ಯಕ್ಷ ಎಂ. ವಿನಾಯಕ ರಾವ್, ನಿರ್ದೇಶಕರಾದ ಸೀತಾರಾಮ ಮಡಿವಾಳ, ರಾಮಕೃಷ್ಣ ಖಾರ್ವಿ, ಮಂಜು ಪೂಜಾರಿ, ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ವಂದಿಸಿದರು.















