ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಜೊತೆಯಲ್ಲಿ ಕಲೆ, ಸಾಹಿತ್ಯ, ಕೌಶಲ್ಯಗಳತ್ತಲೂ ವಿಶೇಷ ಆದ್ಯತೆ ನೀಡುವ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಜಾದೂ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಖ್ಯಾತ ಜಾದೂಗಾರರಾದ ಸತೀಶ್ ಹೆಮ್ಮಾಡಿ ಅವರ ಭ್ರಮಾಲೋಕ ತಂಡವು ವಿಭಿನ್ನ ಜಾದೂ ಕೈಚಳಕಗಳ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.
ಮಾಯದ ಜಾದೂ, ಮಾತನಾಡುವ ಗೊಂಬೆಯಂತಹ ಜಾದೂ ಪಟ್ಟುಗಳನ್ನು ಪ್ರದರ್ಶಿಸಿದ ಸತೀಶ್ ಹೆಮ್ಮಾಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಜಾದೂ ಎಂಬುದು ಮಾಯೆಯಲ್ಲ, ಭ್ರಮೆಯಲ್ಲ, ಅದೊಂದು ವಿಜ್ಞಾನಾಧಾರಿತ ಕೈಚಳಕ. ನಿರಂತರ ಅಭ್ಯಾಸದಿಂದ ಮಾತ್ರವೇ ಈ ಕಲೆಯಲ್ಲಿ ಪರಿಣತಿ ಹೊಂದಲು ಸಾಧ್ಯ. ಈ ಅಭ್ಯಾಸದಿಂದ ಮನಸ್ಸು ಮತ್ತು ಇಂದ್ರಿಯಗಳು ಚುರುಕಾಗುವುದರೊಂದಿಗೆ ಬುದ್ಧಿಶಕ್ತಿಯ ವೃದ್ಧಿಯಾಗುವುದು.
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ಹಲವಾರು ವರ್ಷಗಳಿಂದ ಹವ್ಯಾಸಿ ಕಲೆಗಳಿಗೆ ಬರಪೂರ ಪ್ರೋತ್ಸಾಹ ನೀಡುತ್ತಿದ್ದು, ಬಹಳಷ್ಟು ವಿದ್ಯಾರ್ಥಿಗಳು ಈ ಜಾದೂಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಂ, ಶಾಲಾ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಹಾಗೂ ಶಿಕ್ಷಕ- ಶಿಕ್ಷಕೇತರ ವೃಂದದವರು, ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಹಶಿಕ್ಷಕಿ ಸುಮಲತಾ ಜೋಗಿ ಸ್ವಾಗತಿಸಿ, ವಂದಿಸಿದರು.















